ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಣಾಮ ಮುಂದಿನ ದಿನಗಳಲ್ಲಿ ಆಹಾರ ಧಾನ್ಯ ಕೊರತೆ ಉಂಟಾಗಲಿದ್ದು, ಬೆಲೆ ಏರಿಕೆ ಆಗಲಿದೆ.
ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಕಳೆದ 50 ವರ್ಷದಲ್ಲಿ ಮೂರನೇ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಆಹಾರ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಗಳ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಅಂತರ್ಜಲ ಕುಸಿತವಾಗಿರುವುದರಿಂದ ಬೇಸಿಗೆ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣ ಇಲ್ಲವಾಗಿದೆ.
148 ಲಕ್ಷ ಟನ್ ಉತ್ಪಾದನೆ ಗುರಿ ಇದ್ದು, 90 ಲಕ್ಷ ಉತ್ಪಾದನೆಯ ನಿರೀಕ್ಷೆ ಇದೆ. 61.98 ಲಕ್ಷ ಟನ್ ಆಹಾರ ಧಾನ್ಯ ಕೊರತೆಯಾಗುವ ಸಂಭವವಿದೆ. ಮುಂಗಾರಿನಲ್ಲಿ ಭತ್ತ, ರಾಗಿ, ಜೋಳ, ಅವರೆ, ತೊಗರಿ, ಹೆಸರು ಮೊದಲಾದ ಧಾನ್ಯಗಳು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಹಿಂಗಾರಿನಲ್ಲಿ ಭತ್ತ, ಕಿರು ಧಾನ್ಯ, ತೊಗರಿ ಬಿತ್ತನೆ ಕಡಿಮೆ ಇಲ್ಲವೇ ಶೂನ್ಯವಾಗಿದೆ.
ಆಹಾರ ಉತ್ಪಾದನೆ ಕಡಿಮೆಯಾಗುವುದರಿಂದ ಎಲ್ಲಾ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆಹಾರ ಧಾನ್ಯಗಳ ಬೆಲೆ ಶೇಕಡ 20 ರಿಂದ 40 ರಷ್ಟು ಹೆಚ್ಚಳ ಆಗಬಹುದು. ಈಗಾಗಲೇ ಜನಸಾಮಾನ್ಯರನ್ನು ಕಾಡುತ್ತಿರುವ ಜಾಗತಿಕ ಆರ್ಥಿಕ ಕುಸಿತ, ಹಣದುಬ್ಬರಗಳು ಇನ್ನಷ್ಟು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.