ಬೆಂಗಳೂರು: ಆಹಾರ ಕಲಬೆರಕೆ ತಡೆಗೆ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣಿಕರಣ ಪತ್ರ(ಫೋಸ್ಟಾಕ್ ಪ್ರಮಾಣ ಪತ್ರ) ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ಹೋಟೆಲ್ ಗಳಲ್ಲಿ ಗುಣಮಟ್ಟದ ಆಹಾರ ಲಭ್ಯತೆ ಉದ್ದೇಶದಿಂದ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ರಾಜ್ಯದ ಎಲ್ಲಾ ರೀತಿಯ ಹೋಟೆಲ್ ಗಳು, ಬೇಕರಿಗಳು, ಆನ್ಲೈನ್ ನಲ್ಲಿ ಫುಡ್ ಡೆಲಿವರಿ ಮಾಡುವ ಕಂಪನಿಗಳು, ಫಿಜ್ಜಾ, ಬರ್ಗರ್ ಮಾರಾಟ ಮಾಡುವ ಹೋಟೆಲ್ ಗಳು ಫೋಸ್ಟಾಕ್ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯ ಮಾಡಿದೆ.
ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಆಹಾರ ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದ್ದು, ಸುಮಾರು 14 ಲಕ್ಷ ಆಹಾರ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡಿವೆ.
ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯವಾಗಿದೆ. ಆದರೆ, ಬಹುತೇಕ ಹೋಟೆಲ್ ಗಳು, ರಸ್ತೆ ಬದಿಯಲ್ಲಿ ಮಾರಾಟ ಮಾಡುವವರು, ಆಹಾರ, ಸಿಹಿ ತಿಂಡಿ, ಖಾರ ತಿನಿಸು, ಕರಿದ ಪದಾರ್ಥಗಳಲ್ಲಿ ರುಚಿ ಹೆಚ್ಚಳ ಮಾಡಲು ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶ ಬಳಸಿ ಕಲಬೆರಿಕೆ ಆಹಾರ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಆಹಾರ ಉತ್ಪನ್ನ ಉದ್ಯಮಗಳು ಪೋಸ್ಟಾಕ್ ಪ್ರಮಾಣ ಪತ್ರ ಪಡೆಯುವಂತೆ ನಿಯಮ ಜಾರಿಗೆ ತರಲಾಗಿದೆ. 2006 ರಿಂದ ಎಲ್ಲಾ ಆಹಾರ ಉದ್ದಿಮೆದಾರರು ಪೋಸ್ಟಾಕ್ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಕೇಂದ್ರ ಸರ್ಕಾರ ಈ ಕುರಿತಾಗಿ ಆದೇಶ ಹೊರಡಿಸಿದೆ.
ರಸ್ತೆ ಬದಿ ಹೊಟೇಲ್ ನಡೆಸುತ್ತಿರುವವರು ಸೇರಿದಂತೆ ಎಲ್ಲಾ ಬಗೆಯ ಹೋಟೆಲ್ ಮಾಲೀಕರು ಕಡ್ಡಾಯವಾಗಿ ಪೋಸ್ಟಾಕ್ ಪ್ರಮಾಣ ಪತ್ರ ಪಡೆದುಕೊಳ್ಳಬೇಕಿದೆ. ಆಹಾರ ವ್ಯಾಪಾರದ ಕಾರ್ಯಾಚರಣೆ ಆವರಣದಲ್ಲಿ ಆಹಾರ ವಿತರಣೆಯಲ್ಲಿ ಎಲ್ಲಾ ಅಥವಾ ಕನಿಷ್ಠ ಐದು ಆಹಾರ ನಿರ್ವಾಹಕರು ಕಡ್ಡಾಯ ತರಬೇತಿ ಪಡೆದಿರಬೇಕು ಎಂದು ಹೇಳಲಾಗಿದೆ.