ಬೆಂಗಳೂರು: ರದ್ದಾದ ಪಡಿತರ ಚೀಟಿಗಳ ಮತ್ತೊಮ್ಮೆ ಪರಿಶೀಲಿಸಿ ಮರುಮಂಜೂರಾತಿ ನೀಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ನಯನಾ ಮೋಟಮ್ಮ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ 2021ರ ಜೂನ್ 1ರಂದು ಆದೇಶ ಹೊರಡಿಸಿದ್ದು, ಅದರಂತೆ ರದ್ದುಗೊಂಡ ಬಿಪಿಎಲ್ ಪಡಿತರ ಚೀಟಿಗಳಿಗೆ ಮರು ಜೀವ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿದವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಆಗ ಆದೇಶದಲ್ಲಿ ತಿಳಿಸಲಾಗಿತ್ತು. 2022ರ ಆಗಸ್ಟ್ 28ರಂದು ಆದೇಶ ತಡೆ ಹಿಡಿಯಲಾಗಿದ್ದು, ಈ ಮೊದಲಿನ ಆದೇಶದಂತೆ ರದ್ದುಗೊಂಡಿರುವ ಪಡಿತರ ಚೀಟಿಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ರದ್ದಾದ ಪಡಿತರ ಚೀಟಿಗಳಿಗೆ ಮರುಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.