ನೆನಪಿನ ಶಕ್ತಿ ಹೆಚ್ಚಿಸಲು ಮನೆ ಮದ್ದು ಎಂದರೆ ಅದು ಒಂದೆಲಗ ಅಥವಾ ಬ್ರಾಹ್ಮಿ. ಒಂದೆಲಗ ಆಹಾರವೂ ಹೌದು, ಔಷಧವೂ ಹೌದು. ಒಂದೆಲಗದಲ್ಲಿನ ಬೆಕೊಸೈಡ್ ಎ ಮತ್ತು ಬಿ ಅಂಶಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ. ನರ ರೋಗಗಳಿಗೂ ಇದು ದಿವ್ಯೌಷಧಿ. ಚಿಕ್ಕ ಮಕ್ಕಳಲ್ಲಿ ಜ್ಞಾಪಕಶಕ್ತಿ ವೃದ್ಧಿಸಲು ಬ್ರಾಹ್ಮಿ ಕಷಾಯ ಸಹಾಯಕಾರಿ.
* ಒಂದೆಲಗ ಅಥವಾ ಬ್ರಾಹ್ಮಿ ಎರಡು ಎಲೆಗಳನ್ನು ಪ್ರತಿದಿನ ಮುಂಜಾನೆ ಸೇವಿಸುವುದರಿಂದ ಮಕ್ಕಳ ಬುದ್ಧಿ ಚುರುಕಾಗಿ, ಜ್ಞಾಪಕಶಕ್ತಿ ಹೆಚ್ಚುತ್ತದೆ.
* ಒಂದೆಲಗದ ಎಲೆ, ಕಾಂಡಗಳನ್ನು ಜಜ್ಜಿ, ನೀರಿಗೆ ಹಾಕಿ ಕುದಿಸಿ, ಒಂದು ಚಮಚ ಜೇನುತುಪ್ಪ ಬೆರಸಿ ಕಷಾಯದ ರೀತಿ ಮುಂಜಾನೆ ಸೇವಿಸುವುದರಿಂದ ಸ್ಮರಣಶಕ್ತಿ ಹೆಚ್ಚುತ್ತದೆ.
* ಒಂದೆಲಗ ಹಾಗೂ ಅದರ ಕಾಂಡ, ಒಂದು ಚಮಚ ದನಿಯಾದೊಂದಿಗೆ ನೀರಿಗೆ ಹಾಕಿ ಸ್ವಲ್ಪ ಹಾಲು ಸೇರಿಸಿ ಕುದಿಸಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
* ಆಹಾರದಲ್ಲಿ ತಂಬುಳಿ ರೀತಿಯಲ್ಲಿ ಅಥವಾ ಬ್ರಾಹ್ಮಿ ಎಲೆಗಳನ್ನು ಹಾಗೆಯೇ ಸೇವಿಸುವುದರಿಂದ ಕುಗ್ಗಿದ ನರತಂತುಗಳ ವಿಸ್ತರಣೆಗೆ ಸಹಕಾರಿಯಾಗುತ್ತದೆ.
* ಬ್ರಾಹ್ಮಿ ಕಷಾಯ ಸೇವನೆ ದೇಹದಲ್ಲಿನ ಉಷ್ಣತೆ, ಅಲ್ಸರ್ ನಂತಹ ಸಮಸ್ಯೆಯನ್ನು ನಿವಾರಿಸುತ್ತದೆ.