ಒಂದೇ ಒಂದು ಸೋಲಿಗೆ ಎಲ್ಲವೂ ಮುಗಿದೇ ಹೋಯ್ತು ಎಂದು ಕೊರಗುವವರೇ ಜಾಸ್ತಿ. ಯಾವುದೇ ಕೆಲಸ ಕಾರ್ಯಗಳಿಗೆ ಸತತ ಪ್ರಯತ್ನ, ಪರಿಶ್ರಮ ಅಗತ್ಯ. ಕೆಲವೊಮ್ಮೆ ಸೋಲು ಎದೆಗುಂದಿಸಿಬಿಡುತ್ತದೆ. ಅದಕ್ಕೆಲ್ಲ ಅಂಜದೆ ಮುನ್ನುಗ್ಗಿದ್ದರೆ ಯಶಸ್ಸು ನಿಮ್ಮದಾಗುತ್ತದೆ.
ಸೋಲೇ ಗೆಲುವಿನ ಮೆಟ್ಟಿಲು ಎಂದು ಹೇಳಲಾಗುತ್ತದೆ. ಎಲ್ಲರೂ ಮೊದಲ ಪ್ರಯತ್ನದಲ್ಲೇ ಗೆಲ್ಲಲು ಸಾಧ್ಯವಿಲ್ಲ. ಅದೇ ರೀತಿ ನಿರಂತರ ಸೋಲಿನಿಂದ ಕಂಗೆಡಬೇಕಿಲ್ಲ.
ಕ್ರೀಡೆ, ಚುನಾವಣೆ, ಕೆಲಸ, ಕಾರ್ಯಗಳಲ್ಲಿ ಯಶಸ್ಸು ಗಳಿಸಲು, ಗುರಿ ತಲುಪಲು ಕಠಿಣ ಶ್ರಮ ಅವಶ್ಯಕ. ಸೋತಾಗ ಹಿನ್ನಡೆಯಾಯಿತೆಂದು ಕುಗ್ಗಬಾರದು.
ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ತಿಳಿಯುವ ಪ್ರಯತ್ನವಾಗಬೇಕು. ಆ ತಪ್ಪುಗಳನ್ನು ಸರಿಪಡಿಸಿಕೊಂಡು, ಮುನ್ನಡೆಯಬೇಕು. ಇದಕ್ಕಾಗಿ ಪೂರ್ವಸಿದ್ಧತೆ ಕೂಡ ಇರಬೇಕು. ಕೊನೆ ಹಂತದಲ್ಲಿ ಒತ್ತಡಕ್ಕೆ ಒಳಗಾಗಿ ಹಿನ್ನಡೆ ಅನುಭವಿಸುವುದಕ್ಕಿಂತ ಮೊದಲೇ ಸಿದ್ಧತೆ ಮಾಡಿಕೊಂಡರೇ ಅನುಕೂಲವಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಯಶಸ್ಸು ನಿಮ್ಮನ್ನು ಹಿಗ್ಗಿಸುವುದಿಲ್ಲ. ಸೋಲು ಕಂಗೆಡಿಸುವುದಿಲ್ಲ.