ಬೇಗ ತೂಕ ಇಳಿಸಿಕೊಳ್ಳಲು ಯಾವುದು ಸುಲಭ ಉಪಾಯ ಎಂಬುದು ಎಲ್ಲರ ಪ್ರಶ್ನೆ. ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸ್ತಾರೆ. ಅದಕ್ಕೆ ಕಸರತ್ತು, ಡಯಟ್ ಮಾಡ್ತಾರೆ ನಿಜ. ಆದ್ರೆ ಯಾವುದನ್ನೂ ನಿಯಮಿತವಾಗಿ, ಸರಿಯಾಗಿ ಮಾಡುವುದಿಲ್ಲ. ಹಾಗಾಗಿ ತೂಕ ಇಳಿಯೋದಿಲ್ಲ.
ತೂಕ ಇಳಿಸಲು ಕೆಲ ಟಿಪ್ಸ್ ಗಳನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ. ಸಮತೋಲನ ಆಹಾರದಲ್ಲಿ ಪ್ರೋಟೀನ್ ಮುಖ್ಯ ಪಾತ್ರವಹಿಸುತ್ತದೆ. ಪ್ರೋಟೀನ್ ತೂಕ ಹೆಚ್ಚಿಸಲು ಹಾಗೂ ತೂಕ ಇಳಿಸಲು ಎರಡಕ್ಕೂ ನೆರವಾಗುತ್ತದೆ. ಪ್ರೋಟೀನ್ ಯುಕ್ತ ಆಹಾರ ಸೇವನೆ ಮಾಡುವುದ್ರಿಂದ ನಿಮಗೆ ಬೇಗ ಹಸಿವಾಗುವುದಿಲ್ಲ. ಪ್ರೋಟೀನ್ ಸೇವನೆಯಿಂದ ದೇಹದಲ್ಲಿರುವ ಅನವಶ್ಯಕ ಕೊಬ್ಬನ್ನು ಹೊರ ಹಾಕಬಹುದು. ತೂಕ ಇಳಿಸಲು ಬಯಸುವವರು ಸರಿ ಪ್ರಮಾಣದಲ್ಲಿ ಪ್ರೋಟೀನ್ ಆಹಾರವನ್ನು ಸೇವನೆ ಮಾಡಿ. ನಾಲ್ಕು ದಿನ ಮಾಡಿ ಬಿಡಬೇಡಿ. ನಿಯಮಿತವಾಗಿ ಮಾಡುತ್ತ ಬಂದ್ರೆ ಪರಿಣಾಮ ಕಾಣಬಹುದು.
ನಿಮ್ಮ ದೇಹದಲ್ಲಿ ಮೆಟಾಬಾಲಿಸಂ ಪ್ರಮಾಣ ಸರಿಯಾಗಿದ್ದರೆ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಗ್ರೀನ್ ಟೀ ಸೇವನೆ, ರಾತ್ರಿ ಸರಿಯಾದ ನಿದ್ರೆ, ಹೆಚ್ಚಿನ ನೀರು ಸೇವನೆ ಮಾಡುತ್ತ ಬಂದ್ರೆ ಕೊಬ್ಬು ಕಡಿಮೆಯಾಗುತ್ತ ಬರುತ್ತದೆ. ಇದ್ರಿಂದ ಸ್ವಾಭಾವಿಕವಾಗಿ ದೇಹದ ತೂಕ ಇಳಿಯುತ್ತ ಬರುತ್ತದೆ. ಹಾಗಾಗಿ ಮೆಟಾಬಾಲಿಸಂ ಪ್ರಮಾಣವನ್ನು ಸರಿಯಾಗಿಡುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತ ಬನ್ನಿ.
ಆಹಾರದಲ್ಲಿ ಸಕ್ಕರೆ, ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ. ಸ್ಥೂಲಕಾಯದವರು ಸಕ್ಕರೆ, ಸಿಹಿ ಪದಾರ್ಥ, ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದರಿಂದ ಹಸಿವನ್ನು ಕಡಿಮೆ ಮಾಡುವ ಜೊತೆಗೆ ಕ್ಯಾಲೋರಿ ಪ್ರಮಾಣ ಕೂಡ ಕಡಿಮೆಯಾಗುತ್ತದೆ.
ಆಹಾರ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದ್ರಿಂದ ತೂಕ ಇಳಿಸಿಕೊಳ್ಳುವುದು ಸಾಧ್ಯ. ಆದ್ರೆ ವ್ಯಾಯಾಮ ಮಾಡುವವರು ನಿಯಂತ್ರಣ ತಪ್ಪಿ ಆಹಾರ ಸೇವನೆ ಮಾಡಿದ್ರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ.