ದೇಹ ತೂಕ ಹೆಚ್ಚಾಗಿದೆ ಸಡನ್ನಾಗಿ ಕರಗಿಸಿಕೊಳ್ಳುವುದಕ್ಕಂತೂ ಆಗಲ್ಲ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ ನೋಡಿ.
ಮೊದಲು ನಿಮ್ಮ ದೇಹತೂಕವನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ಎತ್ತರಕ್ಕೆ ತಕ್ಕಷ್ಟು ನಿಮ್ಮ ದೇಹತೂಕ ಇದೆಯಾ ಎಂದು ಗಮನಿಸಿ. ಇನ್ನು ಊಟ, ತಿಂಡಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಕೂಡ ಪಟ್ಟಿ ಮಾಡಿಕೊಳ್ಳಿ.
ಆರೋಗ್ಯದಾಯಕವಾದ ಆಹಾರದ ಜತೆಗೆ ರುಚಿಯಾಗಿ ಹೇಗೆಲ್ಲಾ ಅಡುಗೆ ಮಾಡಬಹುದು ಎಂಬುದನ್ನು ಟ್ರೈ ಮಾಡಿ. ಈಗ ಯೂ ಟ್ಯೂಬ್ ತಡಕಾಡಿದರೆ ಸಾವಿರಾರು ಡಯೆಟ್ ರೆಸಿಪಿಗಳು ಸಿಗುತ್ತದೆ. ಇದರಲ್ಲಿ ನಿಮಗೆ ಏನು ಇಷ್ಟ ಆಗುತ್ತೋ ಅದನ್ನು ಮಾಡಿ. ನಾಲ್ಕು ಇಡ್ಲಿ ತಿನ್ನುತ್ತಿದ್ದರೆ 3 ಇಡ್ಲಿ ತಿನ್ನಿ, ಬಟ್ಟಲು ತುಂಬಾ ಅನ್ನದ ಬದಲು, 1 ಕಪ್ ಅನ್ನ ಊಟ ಮಾಡಿ ಸಲಾಡ್ ಗಳನ್ನು ಹೆಚ್ಚು ತಿನ್ನಿ.
ಸಾಧ್ಯವಾದರೆ ದಿನಕ್ಕೊಂದು ಎಳನೀರು ಕುಡಿಯಿರಿ. ನೀರು ಕುಡಿಯುವುದನ್ನು ಮಾತ್ರ ಮರೆಯದಿರಿ. ಆ್ಯಪಲ್ ತೆಗೆದುಕೊಳ್ಳುವಷ್ಟು ದುಡ್ಡು ನಮ್ಮ ಹತ್ತಿರ ಇರಲ್ಲ ಎನ್ನುವವರು ಸೀಬೆ ಹಣ್ಣು ಸಿಕ್ಕರೆ ಮರೆಯದೇ ಮನೆಗೆ ತನ್ನಿ. ಇದು ಜೀರ್ಣಕ್ರೀಯೆಯನ್ನು ಸರಾಗಗೊಳಿಸುತ್ತದೆ ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಇನ್ನು ನಿಮ್ಮ ಉಡುಗೆ-ತೊಡುಗೆಗಳ ಬಗ್ಗೆ ಕೂಡ ಗಮನವಿರಿಸಿ. ತುಂಬಾ ಟೈಟ್ ಆದ ಬಟ್ಟೆಗಿಂತ ನಿಮ್ಮ ದೇಹಕ್ಕೆ ಸರಿಹೊಂದುವಂತಹ ಬಟ್ಟೆ ಆರಿಸಿಕೊಳ್ಳಿ.
ಯೋಗ ಮಾಡುವುದಕ್ಕೆ ವಾಕ್ ಮಾಡುವುದಕ್ಕೆ ಸಮಯವಿಲ್ಲ ಎನ್ನುವವರು ಸ್ವಲ್ಪ ಬೇಗ ಏಳುವುದಕ್ಕೆ ಟ್ರೈ ಮಾಡಿ. ದಿನಕ್ಕೆ 10 ನಿಮಿಷ ಯೋಗ ಮಾಡಿ. ಹಾಲು, ತರಕಾರಿ ತರುವುದಕ್ಕೆ ಸಾಧ್ಯವಾದಷ್ಟು ನಡೆದುಕೊಂಡೇ ಹೋಗಿ.