ಹವಾಮಾನ ಬದಲಾದಾಗ, ನಾವು ತಿನ್ನುವ ಆಹಾರ, ಜೀವನಶೈಲಿ, ಧೂಳು ಹೀಗೆ ಅನೇಕ ಕಾರಣಗಳಿಂದ ದಿನನಿತ್ಯ ಏನಾದರೊಂದು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತೇವೆ.
ಅದರ ಬದಲು ಮೊದಲೇ ಜಾಗೃತೆ ವಹಿಸಿ ನಮ್ಮ ಆರೋಗ್ಯವನ್ನು ಕಾಪಿಟ್ಟುಕೊಳ್ಳುವ ಜಾಣತನ ಮಾಡಿದರೆ ದುಡ್ಡು ಉಳಿತಾಯವಾಗುತ್ತದೆ ಜತೆಗೆ ಆರೋಗ್ಯದಿಂದಲೂ ಇರಬಹುದು.
ನಿಂಬೆಹಣ್ಣಿನಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿವೆ. ಅದು ಅಲ್ಲದೇ, ಇದೇನೂ ದುಬಾರಿ ಕೂಡ ಅಲ್ಲ. ದಿನಾ ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದು ಅಥವಾ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಜ್ಯೂಸ್ ಮಾಡುವಾಗ ಸಕ್ಕರೆ ಬದಲು ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಕುಡಿಯಿರಿ.
ಇನ್ನು ಮನೆ ಮಂದೆ ತುಳಸಿ ಗಿಡ ಅಂತೂ ಎಲ್ಲರ ಮನೆಯಲ್ಲೂ ಇರುತ್ತದೆ. ತುಳಸಿ ಎಲೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಿರುತ್ತದೆ. ಪ್ರತಿದಿನ ಬೆಳಿಗ್ಗೆ 2 ತುಳಸಿ ಎಲೆ ಜಗಿದು ತಿಂದರೆ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಸಾಮಾನ್ಯ ಶೀತ, ಕೆಮ್ಮುವನ್ನು ಇದು ನಿವಾರಿಸುತ್ತದೆ. ಮಕ್ಕಳಿಗೂ ಇದರ ರಸವನ್ನು ಕುಡಿಸಿದರೆ ಒಳ್ಳೆಯದು.
ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ. ಇವಾಗ ಎಲ್ಲರೂ ಮೂಳೆಯ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿ ಪ್ರತಿದಿನ ರಾತ್ರಿ ಅಥವಾ ಬೆಳಿಗ್ಗೆ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಆರೋಗ್ಯವು ಚೆನ್ನಾಗಿರುತ್ತದೆ.
ಇನ್ನು ನೆಲ್ಲಿಕಾಯಿ ಕಣ್ಣು, ಚರ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏನಾದರು ಕೆಲಸ ಮಾಡುವಾಗ ಒಂದು ನೆಲ್ಲಿಕಾಯಿಯನ್ನು ಹತ್ತಿರದಲ್ಲಿಟ್ಟುಕೊಂಡು ತಿನ್ನುತ್ತಾ ಇರಿ. ಇದರಿಂದ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ದೂರವಾಗುತ್ತದೆ. ಇದನ್ನು ಪೇಸ್ಟ್ ಮಾಡಿ ಮೊಸರಿನೊಂದಿಗೆ ಸೇರಿಸಿ ಕೂದಲಿಗೆ ಹಚ್ಚಿದರೆ ಕೂದಲು ನಳನಳಿಸುತ್ತದೆ.