ಚಳಿಗಾಲ ಶುರುವಾಗಿದೆ. ಶೀತಗಾಳಿ ಚರ್ಮ ಒಣಗಲು ಕಾರಣವಾಗುತ್ತದೆ. ಕೈ, ಕಾಲುಗಳ ಬಿರುಕು, ಉರಿ ಒಣ ಚರ್ಮದವರಿಗೆ ಮತ್ತಷ್ಟು ಸಮಸ್ಯೆಯುಂಟು ಮಾಡುತ್ತದೆ. ಬಿರುಕು ಬಿಟ್ಟ ಹಿಮ್ಮಡಿ ದೊಡ್ಡ ಸಮಸ್ಯೆ. ಕೆಲವರ ಹಿಮ್ಮಡಿ ಬಿರುಕು ಬಿಟ್ಟು ರಕ್ತ ಬರುವುದುಂಟು. ಇದ್ರ ಉರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಬಿರುಕು ಹಿಮ್ಮಡಿಯಿಂದಾಗಿ ಸುಂದರ ಚಪ್ಪಲಿ ಹಾಕಿಕೊಳ್ಳಲಾಗುವುದಿಲ್ಲ.
ಬಿರುಕು ಬಿಟ್ಟ ಹಿಮ್ಮಡಿಯನ್ನು ಮುಚ್ಚಿಕೊಂಡು ಓಡಾಡುವ ಬದಲು ಮನೆ ಮದ್ದಿನಿಂದ ಕೆಲವೇ ದಿನಗಳಲ್ಲಿ ಒಡೆದ ಹಿಮ್ಮಡಿಗೆ ಗುಡ್ ಬಾಯ್ ಹೇಳಿ. ಚಳಿಗಾಲದಲ್ಲಿಯೂ ಸುಂದರ ಕಾಲುಗಳನ್ನು ನಿಮ್ಮದಾಗಿಸಿಕೊಳ್ಳಿ. ಚಳಿಗಾಲದಲ್ಲಿ ಹಿಮ್ಮಡಿ ಒಡಕಿಗೆ ಇಲ್ಲಿದೆ ಸರಳ ಉಪಾಯ.
ಬೆಳ್ಳಿಗ್ಗೆ ಸ್ನಾನಕ್ಕಿಂತ ಐದು ನಿಮಿಷ ಮೊದಲು ಹಿಮ್ಮಡಿಗೆ ಫುಟ್ ಕ್ರೀಂ ಅಥವಾ ಎಣ್ಣೆಯನ್ನು ಹಚ್ಚಿ. ಸ್ನಾನವಾದ ನಂತ್ರ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ. ಇದ್ರಿಂದ ಹಿಮ್ಮಡಿ ತೇವಾಂಶಯುಕ್ತವಾಗಿದ್ದು ಒಣ ಚರ್ಮದ ಸಮಸ್ಯೆ ಕಾಡುವುದಿಲ್ಲ.
ಸ್ನಾನ ಮಾಡುವ ವೇಳೆ ಬಾತ್ ಸ್ಟಾಲ್ ಅಥವಾ ಬಾತ್ ಆಯಿಲ್ ನೀರಿಗೆ ಹಾಕಿ ಸ್ನಾನ ಮಾಡಿ.
ಪ್ರತಿದಿನ ಹಿಮ್ಮಡಿಗೆ ಎಣ್ಣೆ ಹಾಗೂ ಮಾಯಿಶ್ಚರೈಸರ್ ಕ್ರೀಂ ಬಳಸುವ ಜೊತೆಗೆ ವಾರಕ್ಕೊಮ್ಮೆ ಪಾದಗಳ ಆರೈಕೆ ಮಾಡಿ. ಪಾದಗಳನ್ನು ಸ್ಕ್ರಬ್ಬಿಂಗ್ ಮಾಡಿ. ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್ಬಿಂಗ್ ಬಗ್ಗೆ ನಿಮಗೆ ವಿಶ್ವಾಸವಿಲ್ಲವೆಂದಾದ್ರೆ ನಿಂಬೆ ಹಣ್ಣಿನಿಂದ ಸ್ಕ್ರಬ್ ಮಾಡಿಕೊಳ್ಳಿ. ನಂತ್ರ ಬಿಸಿ ನೀರಿಗೆ ಉಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಅದ್ರಲ್ಲಿ ಕಾಲಿಟ್ಟುಕೊಳ್ಳಿ.
ಪ್ರತಿ ರಾತ್ರಿ ಮಲಗುವ ಮೊದಲು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತ್ರ ಫುಟ್ ಕ್ರೀಮ್ ಹಚ್ಚಿಕೊಂಡು ಐದು ನಿಮಿಷ ಮಸಾಜ್ ಮಾಡಿಕೊಳ್ಳಿ. ಇದ್ರಿಂದ ದಣಿವು, ಕಾಲಿನ ನೋವು ಕಡಿಮೆಯಾಗುತ್ತದೆ. ಹಿಮ್ಮಡಿ ಕೂಡ ಕೋಮಲವಾಗುತ್ತದೆ.
ಉಗುರಿಗೆ ತುಂಬಾ ಸಮಯ ನೇಲ್ ಪಾಲಿಶ್ ಹಚ್ಚಬೇಡಿ. ಆಗಾಗ ನೇಲ್ ಪಾಲಿಶ್ ತೆಗೆದು ಉಗುರನ್ನು ಕತ್ತರಿಸುತ್ತಿರಿ.
ವಿಟಮಿನ್ ಎ ಹಾಗೂ ಮಿಟಮಿನ್ ಡಿ ಕೊರತೆಯಿಂದಾಗಿ ಹಿಮ್ಮಡಿ, ಪಾದ, ಕಾಲು ಒಡೆಯುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಎ ಮತ್ತು ಡಿ ಇರುವಂತೆ ನೋಡಿಕೊಳ್ಳಿ.