ತಿಂಗಳು ಮುಗಿಯುತ್ತಾ ಬಂತೆಂದರೆ ನಿಮ್ಮ ಬಳಿ ಹಣ ಇರುವುದಿಲ್ಲವೇ…? ಅದಕ್ಕಾಗಿ ಯಾರ ಬಳಿಯಾದರೂ ಸಾಲ ಕೇಳುವ ಚಿಂತೆಯಲ್ಲಿ ಇದ್ದೀರಾ…? ಮಾಡಿದ ಆ ಸಾಲವನ್ನು ತೀರಿಸಲು ಮತ್ತೆ ಕಷ್ಟ ಪಡುತ್ತಿದ್ದೀರಾ…? ಹಾಗಿದ್ದರೆ ಇನ್ನು ಆ ಚಿಂತೆ ಬಿಡಿ, ಈ ಐದು ಉಪಾಯವನ್ನು ಅನುಸರಿಸಿ ನಿಮ್ಮ ಸಮಸ್ಯೆಗೆ ಮಂಗಳ ಹಾಡಿ.
ಮುಂಗಡ ಖರ್ಚನ್ನು ಪಟ್ಟಿ ಮಾಡಿ
ಆ ತಿಂಗಳಲ್ಲಿ ನಿಮಗೆ ಯಾವ ಯಾವುದಕ್ಕೆ ಖರ್ಚು ಮಾಡಬೇಕೆಂಬುದನ್ನು ಮೊದಲು ಪಟ್ಟಿ ಮಾಡಿ. ಇದು ಉತ್ತಮ ಅಭ್ಯಾಸವೂ ಹೌದು. ಉದಾಹರಣೆಗೆ ಮನೆ ಬಾಡಿಗೆ, ದಿನಸಿ, ಹಾಲು, ಆಹಾರ ಮತ್ತು ನಿಮ್ಮ ಮನರಂಜನೆಗಾಗಿ ಎಷ್ಟೆಷ್ಟು ಬೇಕೆಂಬುದರ ಬಗ್ಗೆ ಮೊದಲೇ ಪಟ್ಟಿ ಮಾಡಿದಾಗ ನಿಮಗೊಂದು ಚಿತ್ರಣ ಸಿಗುತ್ತದೆ.
ಅನಾವಶ್ಯಕ ಹೆಚ್ಚುವರಿ ಖರ್ಚು ಬೇಡ
ಆದಷ್ಟು ಮಿತವ್ಯಯದತ್ತ ಯೋಚಿಸಿ. ಅನಾವಶ್ಯಕವಾಗಿ ಹೆಚ್ಚುವರಿಯಾಗಿ ಖರ್ಚು ಮಾಡುವ ಮನಃಸ್ಥಿತಿಯನ್ನು ದೂರ ಮಾಡಿ. ನಿಮಗೆ ನಿಜವಾಗಿಯೂ ಅವಶ್ಯಕತೆ ಇರುವುದನ್ನು ಮಾತ್ರ ಖರೀದಿಸಿ. ಒಮ್ಮೆ ನೀವು ತಿಂಗಳಿಗೆ ಇಷ್ಟೇ ಖರ್ಚು ಮಾಡುತ್ತೇನೆ ಎಂದು ಮೊದಲೇ ನಿಶ್ಚಯಿಸಿ ಬಿಟ್ಟರೆ ಈ ರೀತಿಯ ಅನಾವಶ್ಯಕ ಖರ್ಚಿಗೆ ಕಡಿವಾಣ ಬೀಳುತ್ತದೆ.
ಅನಿರೀಕ್ಷಿತ ಖರ್ಚಿಗಾಗಿ ಒಂದಷ್ಟು ಉಳಿಸಿಕೊಳ್ಳಿ
ಮನುಷ್ಯನಿಗೆ ಯಾವ ಸಂದರ್ಭದಲ್ಲಿ ಯಾವ ಕಷ್ಟ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅಥವಾ ಇನ್ಯಾವುದೇ ಖರ್ಚು ಕೂಡಾ ಬರಬಹುದು. ಆಗ ದುಡ್ಡಿಗಾಗಿ ಎಲ್ಲಿಗೆ ಹೋಗಬೇಕು..? ತಕ್ಷಣ ಸಾಲ ಬೇಕೆಂದಾಗ ಕೆಲ ಬಾರಿ ಸಿಗುವುದಿಲ್ಲ. ಹೀಗಾಗಿ ನಿಮ್ಮ ತಿಂಗಳ ಆದಾಯದಲ್ಲಿ ಸ್ವಲ್ಪವನ್ನು ಇದಕ್ಕಾಗಿ ಎತ್ತಿಡಿ. ಅಂದರೆ ಮ್ಯೂಚುವಲ್ ಫಂಡ್, ಠೇವಣಿ ಇತರ ಮಾರ್ಗದಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಕಷ್ಟಕ್ಕೆ ಆಗುತ್ತದೆ.
ಆದ್ಯತೆ ಇಲ್ಲಿ ಬಹಳ ಮುಖ್ಯ
ನೀವು ತಿಂಗಳ ಬಜೆಟ್ ಅನ್ನು ಸಿದ್ಧಪಡಿಸುವಾಗಲೇ ಯಾವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂಬುದನ್ನು ನಿರ್ಧರಿಸಿ. ನಿಮ್ಮ ಆದ್ಯತೆಯಂತೆ ಆ ವಸ್ತುಗಳಿಗೆ ಖರ್ಚನ್ನು ಮಾಡಿ. ಉಳಿದ ಸಂಗತಿಗೆ ನೋಡಿ ಖರ್ಚು ಮಾಡುವುದು ಒಳ್ಳೆಯ ಬೆಳವಣಿಗೆ. ಉದಾಹರಣೆಗೆ ಹೊದಿಕೆಯನ್ನು ಚಳಿಗಾಲದಲ್ಲಿ ಖರೀದಿಸಬೇಕೇ ವಿನಹ ಬೇಸಿಗೆಯಲ್ಲಿ ಅಲ್ಲ.
ವಾರಕ್ಕೊಮ್ಮೆ ಪರಾಮರ್ಶಿಸಿ
ಈ ವಾರ ನೀವು ಏನನ್ನೂ ಖರ್ಚು ಮಾಡಿದ್ದೀರಿ…? ಯಾವುದಕ್ಕೆ ಎಷ್ಟು ಖರ್ಚಾಗಿದೆ…? ಎಂಬ ಬಗ್ಗೆ ಪರಾಮರ್ಶೆಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮಗೆ ಯಾವ ಯಾವ ಸಂಗತಿಗೆ ನೀವು ಖರ್ಚು ಮಾಡಿದ್ದೀರ? ನಿಜಕ್ಕೂ ಅದರ ಅವಶ್ಯಕತೆ ಇತ್ತೇ ಎಂಬ ಬಗ್ಗೆ ನಿಮಗೆ ನೀವೇ ಪ್ರಶ್ನೆಯನ್ನು ಹಾಕಿಕೊಳ್ಳಲು ಅನುಕೂಲವಾಗುತ್ತದೆ. ಆ ಮೂಲಕ ನಿಮ್ಮ ಹಿಡಿತದಲ್ಲಿ ನೀವು ಇರಲು ಅನುಕೂಲ ಆಗುತ್ತದೆ.