ಅಂದವಾದ ಕೇಶರಾಶಿ ಪ್ರತಿ ಹೆಣ್ಣಿನ ಕನಸು. ಇದಕ್ಕಾಗಿ ಪ್ರತಿನಿತ್ಯ ಕೂದಲಿನ ಆರೈಕೆ ತಪ್ಪದೇ ಮಾಡಬೇಕು. ಅದರಲ್ಲೂ ಸುಡು ಸುಡು ಬೇಸಿಗೆಯ ಬಿಸಿಲಿನಲ್ಲಿ ಕೇಶರಾಶಿ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದು ಸರ್ವೇ ಸಾಮಾನ್ಯ. ಬೇಸಿಗೆಯಲ್ಲಿ ತಲೆಕೂದಲಿನ ಆರೋಗ್ಯ ಕಾಪಾಡಿಕೊಳ್ಳದಿದ್ರೆ ಧೂಳು, ಬೆವರು, ಬಿಸಿಲಿನ ಧಗೆಯಿಂದ ಕೂದಲಿನ ಹೊಳಪು ಕುಂದುತ್ತದೆ. ಈ ನಿಟ್ಟಿನಲ್ಲಿ ಬೇಸಿಗೆಯಲ್ಲಿ ನಿಮ್ಮ ಕೇಶರಾಶಿಯ ಬಗ್ಗೆ ಏನೆಲ್ಲಾ ಕಾಳಜಿವಹಿಸಬೇಕು ಅನ್ನೋದು ಇಲ್ಲಿದೆ ನೋಡಿ.
ಟೋಪಿ ಧರಿಸಬೇಕು : ಬಿಸಿಲಿನಿಂದ ತ್ವಚೆ ಮಾತ್ರವಲ್ಲ, ತಲೆ ಕೂದಲು ಸಹ ಡ್ಯಾಮೇಜ್ ಆಗುತ್ತದೆ. ಸೂರ್ಯನ ಕಿರಣದಿಂದ ಕೂದಲಿನ ಬುಡದಲ್ಲಿ ಶುಷ್ಕತೆ ಉಂಟಾಗುತ್ತದೆ. ಇದರಿಂದ ಕೂದಲಿನ ಬುಡ ಸಡಿಲಗೊಂಡು ಹೇರ್ಫಾಲ್ ಆರಂಭವಾಗುತ್ತದೆ. ಆದ್ದರಿಂದ ನೀವು ಬಿಸಿಲಿನ ಸಮಯ ಹೊರಗೆ ಬಂದರೆ ಟೋಪಿ ಇಲ್ಲವೇ ಸ್ಕಾರ್ಫ್ ಧರಿಸುವುದನ್ನು ಮರೆಯಬೇಡಿ.
ಪ್ರತಿನಿತ್ಯ ತಲೆಸ್ನಾನ ಬೇಡ ; ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ನಿತ್ಯವೂ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಕೂದಲಿನಲ್ಲಿ ಸಹಜವಾಗಿ ಇರುವ ಎಣ್ಣೆಯ ಅಂಶ ಕಡಿಮೆಯಾಗಿ ಹೊಳಪು ಮಾಯವಾಗುತ್ತದೆ. ಆದ್ದರಿಂದ ಸೌಮ್ಯವಾದ ಶ್ಯಾಂಪು ಬಳಸಿ ದಿನ ಬಿಟ್ಟು ದಿನ ತಲೆ ಸ್ನಾನ ಮಾಡುವುದು ಒಳಿತು.
ಯಥೇಚ್ಚವಾಗಿ ನೀರು ಕುಡಿಯಿರಿ: ಬೇಸಿಗೆಯಲ್ಲಿ ನಿರ್ಜಲೀಕರಣವಾಗುವುದರಿಂದ ದೇಹಕ್ಕೆ ಮಾತ್ರ ಹಾನಿಯಾಗುವುದಿಲ್ಲ ಜೊತೆಗೆ ತಲೆಕೂದಲು ಕೂಡ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಹೆಚ್ಚು ನೀರು ಕುಡಿಯಬೇಕು. ವಾರಕ್ಕೊಮ್ಮೆ ನೆಲ್ಲಿಕಾಯಿ ಅಥವಾ ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು.
ದೊಡ್ಡ ಹಲ್ಲಿನ ಬಾಚಣಿಗೆ ಬಳಸಿ: ಬೆವರಿನಿಂದ ಕೂದಲು ಸಿಕ್ಕುಗಟ್ಟಬಹುದು. ಈ ನಿಟ್ಟಿನಲ್ಲಿ ದೊಡ್ಡ ಹಲ್ಲಿನ ಬಾಚಣಿಗೆ ಬಳಸುವುದರಿಂದ ಕೂದಲಿನ ಎಳೆಯನ್ನು ನಿಧಾನಕ್ಕೆ ಬಿಡಿಸಬಹುದು. ಅಲ್ಲದೇ ಕೂದಲಿನ ಬುಡದಲ್ಲಿ ರಕ್ತಸಂಚಾರ ಸರಾಗವಾಗುತ್ತದೆ.
ಸ್ನಾನಕ್ಕೆ ಬಿಸಿ ನೀರು ಬೇಡ: ನಿಮ್ಮ ದೇಹದ ತಾಪಮಾನಕ್ಕೆ ಹೊಂದುವಷ್ಟೇ ಬಿಸಿ ನೀರನ್ನು ಬಳಸಿ. ಬಿಸಿ ನೀರು ಬಳಕೆಯಿಂದ ಕೂದಲಿಗೆ ಹಾನಿಯುಂಟಾಗಬಹುದು.
ಡಯೆಟ್ : ಬೇಸಿಗೆಯಲ್ಲಿ ತಲೆಕೂದಲಿನಲ್ಲಿ ತೇವಾಂಶ ಕಾಪಾಡಿಕೊಳ್ಳಲು ನೀರಿನಂಶ ಹೆಚ್ಚಿರುವ ಆಹಾರ ಸೇವಿಸಿ. ಮೆಗ್ನಿಶೀಯಂ, ಸತು, ಕ್ಯಾಲ್ಷಿಯಂಯುಕ್ತ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ.
ಋತುಮಾನಕ್ಕೆ ಅನುಗುಣವಾಗಿ ಕೂದಲಿನ ಆರೈಕೆ ಮಾಡುವುದರಿಂದ ದೀರ್ಘಕಾಲದವರೆಗೆ ಉದ್ದನೆಯ, ಕಪ್ಪಗಿನ, ಹೊಳಪುಳ್ಳ ಕೇಶರಾಶಿ ನಿಮ್ಮದಾಗುತ್ತದೆ.