ಮಗು ಹುಟ್ಟಿದ ಕೂಡಲೆ ಅಳುತ್ತದೆ. ಅದು ನಗುವುದು ಯಾವಾಗ ಎಂಬುದು ನಿಮ್ಮ ಪ್ರಶ್ನೆಯೇ. ಕೆಲವು ಮಕ್ಕಳು ನಿದ್ದೆಯಲ್ಲೇ ಮುಖವರಳಿಸಿ ಬೊಚ್ಚು ಬಾಯಿ ತೋರಿಸಿ ನಗುವುದು ನೀವು ಕಂಡಿರಬಹುದು. ಹಾಗಾದರೆ ಇದು ನಿಜವಾದ ನಗುವೇ?
ಮಗು ನಗುವುದು ಸಾಮಾನ್ಯವಾಗಿ ಮೂರು ತಿಂಗಳ ಬಳಿಕವೇ. ಮಗು ನಿಮ್ಮ ಸ್ವರ ಅಥವಾ ಮನೆಯ ಇತರ ಮಕ್ಕಳ ದನಿ ಕೇಳಿ ಮುಖವರಳಿಸಿ ನಕ್ಕಿತೆಂದರೆ ಮಗುವಿನ ದೃಷ್ಟಿ ಸರಿಯಾಗಿದೆ ಮತ್ತು ಸರಿಯಾಗಿ ಬೆಳೆಯುತ್ತಿದೆ ಎಂದರ್ಥ.
ಇದು ಕಡ್ಡಾಯವೇನಲ್ಲ. ಅವಧಿ ಪೂರ್ವದಲ್ಲಿ ಜನಿಸಿದ ಮಕ್ಕಳು ನಗಲು 4-5 ತಿಂಗಳು ತೆಗೆದುಕೊಳ್ಳಬಹುದು. ಇಷ್ಟಾದರೂ ಮಗು ನಿಮ್ಮ ಮುಖ ನೋಡುತ್ತಿಲ್ಲ, ಗುರುತಿಸುತ್ತಿಲ್ಲ, ನಗುತ್ತಿಲ್ಲ ಎಂದಾದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಮಗು ತನ್ನ ಸಂತೋಷ, ಉತ್ಸಾಹ ಮತ್ತು ಉದ್ವೇಗಗಳನ್ನು ನಗುವಿನ ಮೂಲಕ ವ್ಯಕ್ತಪಡಿಸುತ್ತಾ ತಾನು ಸಾಮಾಜಿಕ ಜೀವಿ ಎಂಬುದನ್ನು ದೃಢಪಡಿಸುತ್ತದೆ. ನಗು-ಅಳುವಿನ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಮಗುವಿಗೆ ಕಚಗುಳಿ ಕೊಟ್ಟಾಗ ನಗುವುದು, ದೂರವಾದಾಗ ಅಳುವುದು ಸಹಜ ಕ್ರಿಯೆ. ಹೀಗಾಗಿ ಮಗುವಿನ ಬೆಳವಣಿಗೆಯ ಹಂತಗಳನ್ನು ಗಮನಿಸುತ್ತಿರುವುದು ಬಹಳ ಮುಖ್ಯ.