ನವದೆಹಲಿ: ನಕಲಿ ಇನ್‌ವಾಯ್ಸಿಂಗ್ ತಡೆಯಲು ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೊರತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇಂದು ನಡೆದ 53 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅವರು ಮಾಹಿತಿ ನೀಡಿ, ಆಧಾರ್ ದೃಢೀಕರಣವು ವಂಚನೆಯ ಇನ್ ಪುಟ್ ತೆರಿಗೆ ಕ್ರೆಡಿಟ್ ಕ್ಲೈಮ್‌ಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಅಖಿಲ ಭಾರತ ಮಟ್ಟದ ಆಧಾರದ ಮೇಲೆ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ಹೊರತರಲಾಗುವುದು. ಇದು ನಕಲಿ ಇನ್‌ವಾಯ್ಸ್‌ಗಳ ಮೂಲಕ ಮಾಡಿದ ವಂಚನೆಯ ಇನ್‌ಪುಟ್ ತೆರಿಗೆ ಕ್ರೆಡಿಟ್ ಕ್ಲೈಮ್‌ಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ನಾವು ಗುಜರಾತ್ ಮತ್ತು ಪುದುಚೇರಿಯಲ್ಲಿ ಪೈಲಟ್ ಯೋಜನೆ ಜಾರಿಗೊಳಿಸಿದ್ದು, ಉತ್ತಮ ಬೆಳವಣಿಗೆ ಕಂಡು ಬಂದಿದೆ. ಜಿಎಸ್‌ಟಿ ಕೌನ್ಸಿಲ್ ನೋಂದಣಿಯ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ರೋಲ್-ಔಟ್ ಮಾಡಲು ಶಿಫಾರಸು ಮಾಡಿದೆ. ವ್ಯಾಪಾರಿಗಳು, ಎಂಎಸ್‌ಎಂಇಗಳು ಮತ್ತು ತೆರಿಗೆದಾರರಿಗೆ ಪ್ರಯೋಜನಕಾರಿಯಾಗುವಂತಹ ಅನೇಕ ನಿರ್ಧಾರಗಳನ್ನು ಕೌನ್ಸಿಲ್ ಸಭೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.