ಹೋಸ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಕೊಲೆ ಬೆದರಿಕೆ ಹಾಕಿದ 39 ವರ್ಷದ ನರ್ಸ್ ಳನ್ನು ಫ್ಲೋರಿಡಾ ರಾಜ್ಯಲ್ಲಿ ಬಂಧಿಸಲಾಗಿದೆ.
ಅಮೆರಿಕ ಸೀಕ್ರೆಟ್ ಸರ್ವಿಸ್ ನಡೆಸಿದ ತನಿಖೆಯ ನಂತರ ನಿವಿಯೆನ್ ಪೆಟಿಟ್ ಫೆಲ್ಪ್ಸ್ ಅವರನ್ನು ಬಂಧಿಸಲಾಗಿದೆ. 56 ವರ್ಷದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದಾರೆ. ದಕ್ಷಿಣ ಏಷ್ಯಾದ ಅಮೆರಿಕನ್ ಮಹಿಳೆಯಾಗಿರುವ ಕಮಲಾ ಅವರಿಗೆ ಫೆಬ್ರವರಿ 13 ರಿಂದ 18 ರವರೆಗೆ ಬೆದರಿಕೆ ಹಾಕಲಾಗಿದೆ. ಉದ್ದೇಶಪೂರ್ವಕವಾಗಿ ಉಪಾಧ್ಯಕ್ಷರನ್ನು ಕೊಲೆ ಮಾಡಲಾಗುವುದು, ದೈಹಿಕ ಹಾನಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಯುನೈಟೆಡ್ ಸ್ಟೇಟ್ ಡಿಸ್ಟ್ರಿಕ್ಟ್ ಕೋರ್ಟ್ ಫ್ಲೋರಿಡಾದಲ್ಲಿ ಕ್ರಿಮಿನಲ್ ದೂರು ಸಲ್ಲಿಕೆ ಆಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಫೆಲ್ಪ್ಸ್ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲಾ ಹ್ಯಾರಿಸ್ ನೀವು ಸಾಯುತ್ತೀರಿ ನಿಮ್ಮ ದಿನಗಳನ್ನು ಎಣಿಸಲಾಗುತ್ತಿದೆ ಎಂದು ಹೇಳಿದ್ದು, ಇದೇ ರೀತಿ ಹಲವು ವಿಡಿಯೋದಲ್ಲಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸೀಕ್ರೆಟ್ ಸರ್ವಿಸ್ ಏಜೆಂಟರು ತನಿಖೆ ಕೈಗೊಂಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕಮಲಾರನ್ನು ಕೊಲೆ ಮಾಡಲು ನರ್ಸ್ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪರಿಶೀಲನೆ ಬಳಿಕ ಬಂಧಿಸಲಾಗಿದೆ.