![](https://kannadadunia.com/wp-content/uploads/2025/02/us-flood.png)
ಜಾರ್ಜಿಯಾ: ಅಮೆರಿಕವು ಕಠಿಣ ಹವಾಮಾನದಿಂದ ತತ್ತರಿಸಿದ್ದು, ಪ್ರಬಲವಾದ ಚಂಡಮಾರುತದ ನಂತರ ಭಾರೀ ಮಳೆಯಾಗಿದ್ದು, ಕೆಂಟುಕಿಯಲ್ಲಿ ಎಂಟು ಜನರು ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆ ಮತ್ತು ನೀರಿನಿಂದ ಆವೃತವಾದ ರಸ್ತೆಗಳಿಂದ ತೊರೆಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ದುರಂತದ ಬಗ್ಗೆ ಮಾತನಾಡಿದ ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್, ಭಾನುವಾರ ಪ್ರವಾಹದಿಂದ ಸಿಲುಕಿಕೊಂಡಿರುವ ನೂರಾರು ಜನರನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.
ವಿಪತ್ತು ಘೋಷಣೆಗಾಗಿ ರಾಜ್ಯದ ವಿನಂತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ್ದು, ರಾಜ್ಯಾದ್ಯಂತ ಪರಿಹಾರ ಕ್ರಮ ಕೈಗೊಳ್ಳಲು ಫೆಡರಲ್ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಗೆ ಅಧಿಕಾರ ನೀಡಿದ್ದಾರೆ.
ತಾಯಿ ಮತ್ತು 7 ವರ್ಷದ ಮಗು ಸೇರಿದಂತೆ ಹೆಚ್ಚಿನ ಸಾವುಗಳು ಕಾರ್ ಗಳು ಹೆಚ್ಚಿನ ಪ್ರಮಾಣದ ನೀರಿನಲ್ಲಿ ಸಿಲುಕಿಕೊಂಡ ಕಾರಣ ಸಂಭವಿಸಿವೆ ಎಂದು ಗವರ್ನರ್ ಬೆಶಿಯರ್ ಹೇಳಿದ್ದಾರೆ.
39,000 ಮನೆಗಳಲ್ಲಿ ವಿದ್ಯುತ್ ಕಡಿತ
ಭಾನುವಾರ ಚಂಡಮಾರುತ ಪ್ರಾರಂಭವಾದಾಗಿನಿಂದ, ರಾಜ್ಯಾದ್ಯಂತ 1,000 ರಕ್ಷಣಾ ಕಾರ್ಯಾಚರಣೆಗಳು ನಡೆದಿವೆ. ಚಂಡಮಾರುತದಿಂದಾಗಿ ಸುಮಾರು 39,000 ಮನೆಗಳು ವಿದ್ಯುತ್ ಕಡಿತಗೊಂಡಿವೆ. ಕೆಲವು ಪ್ರದೇಶಗಳಲ್ಲಿ ಬಲವಾದ ಗಾಳಿಯು ವಿದ್ಯುತ್ ಕಡಿತವನ್ನು ಹೆಚ್ಚಿಸಬಹುದು ಎಂದು ಬೆಶಿಯರ್ ಹೇಳಿದ್ದಾರೆ.
15 ಸೆಂ.ಮೀ ಮಳೆ
ಭಾರೀ ಮಳೆಯ ಬಗ್ಗೆ, ರಾಷ್ಟ್ರೀಯ ಹವಾಮಾನ ಸೇವೆಯ ಹಿರಿಯ ಮುನ್ಸೂಚಕ ಬಾಬ್ ಒರಾವೆಕ್, ಕೆಂಟುಕಿ ಮತ್ತು ಟೆನ್ನೆಸ್ಸೀಯ ಕೆಲವು ಭಾಗಗಳಲ್ಲಿ 6 ಇಂಚುಗಳಷ್ಟು (15 ಸೆಂಟಿಮೀಟರ್) ಮಳೆಯಾಗಿದೆ. ನದಿ, ತೊರೆಗಳು ಅಪಾಯ ಮಟ್ಟ ಮೀರಿದ್ದು, ರಸ್ತೆಗಳಲ್ಲೂ ಭಾರೀ ನೀರಿನಿಂದ ಆವೃತವಾಗಿವೆ.