ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ದರೂರ ಸೇತುವೆ ಮುಳುಗಡೆಯಾಗಿದೆ. ಇಲ್ಲಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಸೇತುವೆ ಮುಳುಗಡೆಯಾಗಿ ಅವಾಂತರ ಸೃಷ್ಟಿಸಿದೆ.
ವರದಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದು, ನದಿಪಾತ್ರದ ಜಮೀನುಗಳು ಜಲಾವೃತಗೊಂಡಿವೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಲಕೋಟಿಯಲ್ಲಿ ಚಿಕ್ಕಮದಲೂರು, ನೀರಲಗಿ, ಕಳಸೂರು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಶೇಂಗಾ, ಮೆಕ್ಕೆಜೋಳ, ಸೋಯಾಬಿನ್ ಬೆಳೆಗಳಿಗೆ ಹಾನಿಯಾಗಿದೆ.
ಹಿರಣ್ಯಕೇಶಿ ನದಿ ನೀರು ನುಗ್ಗಿ ಬಡಕುಂದ್ರಿ ಗ್ರಾಮ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗ್ರಾಮ ಜಲಾವೃತಗೊಂಡಿದ್ದು, ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮುಧೋಳ ಸಮೀಪ ನೂರಾರು ಎಕರೆ ಕಬ್ಬು ಜಲಾವೃತಗೊಂಡಿದೆ. ಕುಂಬಾರ ಗಲ್ಲಿಯಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ರಾಯಭಾಗ ತಾಲ್ಲೂಕಿನ ಮೊಳವಾಡ ಮತ್ತು ಕುಸಲಾಲ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಗ್ರಾಮಗಳು ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಯಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದಿದ್ದು, ನೀರಿನ ರಭಸಕ್ಕೆ ವಾಹನ ಪಲ್ಟಿಯಾಗಿ ಅದರಲ್ಲಿದ್ದ 2 ಎಮ್ಮೆ, 1 ಎತ್ತು ಪ್ರಾಣ ಬಿಟ್ಟಿವೆ.