ಕಲಬುರಗಿ: ಮನೆಯಲ್ಲಿ ಕುಳಿತು ವಿಮಾನ ಟಿಕೆಟ್ ಬುಕಿಂಗ್ ಮಾಡಿದರೆ ಉತ್ತಮ ಲಾಭ ನೀಡುವುದಾಗಿ ನಂಬಿಸಿದ ಸೈಬರ್ ವಂಚಕರು ಮಹಿಳೆಗೆ 89.12 ಲಕ್ಷ ರೂ. ವಂಚಿಸಿದ ಘಟನೆ ನಡೆದಿದ್ದು, ಕಲಬುರಗಿಯ ಬಸವೇಶ್ವರ ಕಾಲೋನಿ ನಿವಾಸಿ ಪ್ರತಿಮಾ ಗಿರೀಶ್ ನೀಡಿದ್ದಾರೆ.
ಸೈಬರ್, ಆರ್ಥಿಕ ಮತ್ತು ಮಾದಕ ವಸ್ತು ತಡೆ(CEN) ಠಾಣೆಯಲ್ಲಿ ನೋಯ್ಡಾ ಮೂಲದ ನಿಕಿತಾ ಬನ್ಸಾಲ್, ಕೇರಳದ ಎಸ್. ಕಿಶೋರ್, ಬೆಂಗಳೂರಿನ ಅಖಿಲೇಶ್ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2023ರ ನವೆಂಬರ್ 7ರಂದು ಟೆಲಿಗ್ರಾಂ ಮೂಲಕ ಪ್ರತಿಮಾ ಅವರನ್ನು ಅಪರಿಚಿತರು ಸಂಪರ್ಕಿಸಿದ್ದು, ಮನೆಯಲ್ಲೇ ಕುಳಿತು ನೆಟ್ವರ್ಕ್ ಸೈಟ್ ನಲ್ಲಿ ವಿಮಾನ ಸೀಟ್ ಬುಕಿಂಗ್ ಮಾಡಿ ದಿನಕ್ಕೆ 7000 ರೂ. ಗಳಿಸಬಹುದು ಎಂದು ನಂಬಿಸಿದ್ದಾರೆ. ಆಮಿಷಕ್ಕೆ ಒಳಗಾದ ಪ್ರತಿಮಾ ವಂಚಕರು ಹೇಳಿದ್ದ ಬ್ಯಾಂಕ್ ಖಾತೆಗೆ 10,848 ರೂ. ಜಮಾ ಮಾಡಿದ್ದಾರೆ. ನಂತರ ಸೀಟ್ ಬುಕಿಂಗ್ ಮಾಡಿದ್ದಕ್ಕೆ 57,058 ರೂಪಾಯಿ ಲಾಭಾಂಶವನ್ನು ಪ್ರತಿಮಾ ಅವರ ಖಾತೆಗೆ ಆರೋಪಿಗಳು ಜಮಾ ಮಾಡಿದ್ದಾರೆ. ಹೆಚ್ಚಿನ ಲಾಭದ ಆಮಿಷಕ್ಕೆ ಒಳಗಾಗಿ ಪ್ರತಿಮಾ ಆರೋಪಿಗಳು ಹೇಳಿದಂತೆ ಹೆಚ್ಚಿನ ಹಣ ಜಮಾ ಮಾಡಿದ್ದು, ಬಳಿಕ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.