
ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ತಂದೆ ಬಂಗಾರಪ್ಪನವರ 35 ಒಡನಾಡಿಗಳಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುವ ಮೂಲಕ ವಿಮಾನಯಾನ ಭಾಗ್ಯ ಕರುಣಿಸಿದ್ದಾರೆ.
ಭಾನುವಾರ ಸೊರಬದ ಬಂಗಾರಧಾಮದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಮಧು ಬಂಗಾರಪ್ಪ ನಂತರ ಶಿವಮೊಗ್ಗಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರವಾಸಿ ಮಂದಿರದಲ್ಲಿ 150 ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಣೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎನ್ಎಸ್ಯುಐನಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸೊರಬದ 35 ಜನ ಬಂಗಾರಪ್ಪನವರ ಸ್ನೇಹಿತರು, ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿನಲ್ಲಿ ವಿಮಾನದಲ್ಲಿ ಕರೆದುಕೊಂಡು ಹೋದ ಅವರು ಅಲ್ಲಿ ಸೊರಬ ಮೂಲದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.