
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಜಾಹೀರಾತು ಫಲಕಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.
ಬಿಬಿಎಂಪಿಯೇ ನಗರಕ್ಕೆ ಮೊದಲ ಶತ್ರುವಾಗಿ ಪರಿಣಮಿಸಿದೆ. ಒಂದೆಡೆ ಜಾಹೀರಾತು ಫಲಕಗಳಿಂದ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ ನಾಗರಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿಯೂ ಹಣವಿಲ್ಲ ಎಂದು ವೈಫಲ್ಯ ಮೆರೆದಿದೆ. ಅಕ್ರಮ ಜಾಹೀರಾತು ಫಲಕಗಳಿಂದಾಗಿ ಬೆಂಗಳೂರು ನಗರ ಕುರೂಪಗೊಳ್ಳುತ್ತಿದೆ. ಈವರೆಗೂ ಅಕ್ರಮ ಜಾಹೀರಾತು ಫಲಕಗಳ ವಿರುದ್ಧ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಸಿಜೆ ಪ್ರಸನ್ನ ಬಿ.ವರಾಳೆ, ನ್ಯಾ. ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ಪೀಠ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನ ಎಲ್ಲಾ ಫ್ಲೆಕ್ಸ್, ಹೋರ್ಡಿಂಗ್ ಗಳ ಸರ್ವೆ ನಡೆಸುವಂತೆ ಆದೇಶ ನೀಡಿರುವ ಹೈಕೋರ್ಟ್, ಎಷ್ಟು ಜಾಹೀರಾತುಗಳಿಗೆ ಅನುಮತಿ ನೀಡಲಾಗಿದೆ? ಜಾಹೀರಾತು ಫಲಕಗಳಿಂದ ಸಂಗ್ರಹವಾದ ಹಣವೆಷ್ಟು? ಅವಧಿ ಮೀರಿದ ಜಾಹೀರಾತುಗಳ ವಿರುದ್ಧ ಕೈಗೊಂಡ ಕ್ರಮವೇನು? ಅನುಮತಿಯಿಲ್ಲದೇ ಅಳವಡಿಸಲಾದ ಜಾಹೀರಾತು ಫಲಕಗಳ ವಿರುದ್ಧ ಕೈಗೊಂಡ ಕ್ರಮವೇನು? ಎಂಬ ಬಗ್ಗೆ ನ.28ರೊಳಗೆ ಸರ್ವೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ.