ಬಂಗಾಳದ ದುರ್ಗಾಪುರದಲ್ಲಿ ಸುವಾಸನೆಯ ಕಾಂಡೋಮ್ ಗಳ ಮಾರಾಟ ಭಾರೀ ಹೆಚ್ಚಳವಾಗಿದೆ. ಅಂದ ಹಾಗೆ, ಎಲ್ಲಾ ರೀತಿಯ ವ್ಯಸನಗಳು ಆರೋಗ್ಯಕ್ಕೆ ಕೆಟ್ಟವು. ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಕೆಲವು ವಿದ್ಯಾರ್ಥಿಗಳು ಕಾಂಡೋಮ್ ಬಳಸುವ ಚಟಕ್ಕೆ ಬಿದ್ದಿದ್ದಾರೆ. ಗರ್ಭನಿರೋಧಕವಾಗಿ ಬಳಸಬೇಕಾದುದನ್ನು ಈ ವಿದ್ಯಾರ್ಥಿಗಳು ನಶೆ ಏರಿಸಿಕೊಳ್ಳಲು ಬಳಸುತ್ತಿದ್ದಾರೆ.
ದುರ್ಗಾಪುರ ನಗರದ ಸಿಟಿ ಸೆಂಟರ್, ಬಿಧಾನನಗರ, ಮುಚಿಪಾರ ಮತ್ತು ಬೆನಚಿಟಿ, ಸಿ ವಲಯ, ಎ ವಲಯ ಸೇರಿದಂತೆ ಹಲವೆಡೆ ಫ್ಲೇವರ್ಡ್ ಕಾಂಡೋಮ್ ಮಾರಾಟ ಅಚ್ಚರಿ ಮೂಡಿಸಿದೆ.
ವಿದ್ಯಾರ್ಥಿಗಳು ಕಾಂಡೋಮ್ ಗಳನ್ನು ಬಿಸಿ ನೀರಿನಲ್ಲಿ ನೆನೆಸುತ್ತಾರೆ. ನಂತರ, ಅದರ ದ್ರವವನ್ನು ಸುಮಾರು 10 ರಿಂದ 12 ಗಂಟೆಗಳ ಕಾಲ ಉಳಿಯುವ ನಶೆ ಪಡೆಯಲು ಕುಡಿಯುತ್ತಾರೆ.
ಹಿಂದೆ ದಿನಕ್ಕೆ ಮೂರರಿಂದ ನಾಲ್ಕು ಕಾಂಡೋಮ್ ಪ್ಯಾಕೆಟ್ ಗಳನ್ನು ಪ್ರತಿ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗ ಅಂಗಡಿಯಿಂದ ಕಾಂಡೋಮ್ ಪ್ಯಾಕ್ ಕಣ್ಮರೆಯಾಗುತ್ತಿದೆ ಎಂದು ದುರ್ಗಾಪುರದ ಮೆಡಿಕಲ್ ಶಾಪ್ ಅಂಗಡಿಯ ಮಾಲೀಕರೊಬ್ಬರು ಹೇಳಿದ್ದಾರೆ.
ದುರ್ಗಾಪುರ ಆರ್‌ಇ ಕಾಲೇಜು ಮಾದರಿ ಶಾಲೆಯ ರಸಾಯನಶಾಸ್ತ್ರ ಶಿಕ್ಷಕ ನೂರುಲ್ ಹಕ್ ಮಾತನಾಡಿ, ಕಾಂಡೋಮ್ ಗಳನ್ನು ಬಿಸಿ ನೀರಿನಲ್ಲಿ ದೀರ್ಘಕಾಲ ನೆನೆಸುವುದರಿಂದ ದೊಡ್ಡ ಸಾವಯವ ಅಣುಗಳು ಒಡೆಯುತ್ತವೆ. ಅದರಲ್ಲಿ ಆಲ್ಕೋಹಾಲ್ ಸಂಯುಕ್ತಗಳು ರೂಪುಗೊಳ್ಳುತ್ತವೆ. ಈ ಸಂಯುಕ್ತ ಯುವಕರನ್ನು ನಶೆಯಲ್ಲಿಡುತ್ತಿದೆ ಎನ್ನಲಾಗಿದೆ.
ದುರ್ಗಾಪುರ ಉಪಜಿಲ್ಲಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಧಿಮಾನ್ ಮಂಡಲ್ ಮಾತನಾಡಿ, ಕಾಂಡೋಮ್‌ನಲ್ಲಿ ಕೆಲವು ರೀತಿಯ ಆರೊಮ್ಯಾಟಿಕ್ ಸಂಯುಕ್ತವಿದೆ. ಅದನ್ನು ಒಡೆಯುವ ಮೂಲಕ ಮದ್ಯವನ್ನು ಉತ್ಪಾದಿಸಲಾಗುತ್ತದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಗಳಲ್ಲಿಯೂ ಕಂಡುಬರುತ್ತದೆ. ಅನೇಕರು ಡೆಂಡ್ರೈಟ್‌ಗಳಿಂದ ಅಮಲೇರಿದಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ.
ಕೆಮ್ಮು ಸಿರಪ್, ಆಫ್ಟರ್ ಶೇವ್, ಪೇಂಟ್ ಇತ್ಯಾದಿಗಳ ಸಾಲಿಗೆ ಈಗ ಕಾಂಡೋಮ್ ಕೂಡ ಸೇರಿವೆ. ಈ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರ ಪ್ರಕಾರ, ಭಾರತೀಯ ದಂಡ ಸಂಹಿತೆ ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ನಿರ್ದಿಷ್ಟ ಕಾನೂನುಗಳನ್ನು ಹೊಂದಿಲ್ಲದ ಕಾರಣ ಅವರು ಮಾದಕ ವ್ಯಸನಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ. ವೈಟ್ ನರ್ ಗಳು, ಕೆಮ್ಮು ಸಿರಪ್ ಗಳು ಸೇರಿದಂತೆ ಕೆಲವು ವಸ್ತುಗಳು ಕಡಿಮೆ ನಿದ್ರಾಜನಕ ಹೊಂದಿರುತ್ತವೆ. ಅವುಗಳನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಆಕ್ಟ್(ಎನ್.ಡಿ.ಪಿ.ಎಸ್.) ಭಾಗವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.