ಬೆಂಗಳೂರು: ವಿವಿಧ ಬಡಾವಣೆಗಳಲ್ಲಿ ಬಿಡಿಎ ವತಿಯಿಂದ ನಿರ್ಮಿಸಿದ ಮತ್ತು ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್ ಗಳ ದರವನ್ನು ನಿರ್ಮಾಣ ವೆಚ್ಚ ಆಧರಿಸಿ ಶೇಕಡ 10 ರಿಂದ 20ರಷ್ಟು ಹೆಚ್ಚಳ ಮಾಡಲು ಬಿಡಿಎ ತೀರ್ಮಾನಿಸಿದೆ.
ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಫ್ಲ್ಯಾಟ್ ದರ ಹೆಚ್ಚಳಕ್ಕೆ ಒಪ್ಪಿಗೆ ಪಡೆಯಲಾಗಿದ್ದು, ಲೋಕಸಭೆ ಚುನಾವಣೆ ನೀತಿ ಸಂಹಿತೆ ತೆರವಾದ ನಂತರ ಪರಿಷ್ಕೃತ ದರ ಪಟ್ಟಿ ಜಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ.
ಕಳೆದ ವರ್ಷ ರಾಜ್ಯ ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಿದೆ. ಅಲ್ಲದೇ, ಸ್ಟ್ಯಾಂಪ್ ಡ್ಯೂಟಿ ದರ ಕೂಡ ಹೆಚ್ಚಳವಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ಬಿಡಿಎ ನಿರ್ಮಿಸಿದ ಫ್ಲ್ಯಾಟ್, ಮನೆಗಳ ಮಾರಾಟವಾಗಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಿಡಿಎ ಫ್ಲ್ಯಾಟ್ ದರ ಹೆಚ್ಚಳ ಮಾಡಲು ಮುಂದಾಗಿದ್ದು, ಹೊಸದಾಗಿ ಫ್ಲ್ಯಾಟ್ ಖರೀದಿಸುವ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.