ನವದೆಹಲಿ: ಇ-ಕಾಮರ್ಸ್ ನಲ್ಲಿನ ವಂಚನೆ ತಡೆ ಉದ್ದೇಶದಿಂದ ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿದೆ.
ಇ-ಕಾಮರ್ಸ್ ವ್ಯವಸ್ಥೆಯಲ್ಲಿ ವ್ಯಾಪಕ ಮೋಸ ಮತ್ತು ವಂಚನೆಯ ವ್ಯಾಪಾರ ನಡೆಯುತ್ತಿದ್ದು, ಇದನ್ನು ತಡೆಯಲು ನಿಯಮಗಳಿಗೆ ಬದಲಾವಣೆ ತರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಫ್ಲ್ಯಾಷ್ ಸೇಲ್ ನಿಷೇಧ, ಮಾರಾಟಗಾರರು, ವಿತರಕರ ವೇದಿಕೆ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುವ ಕುರಿತು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಗ್ರಾಹಕರ ಹಿತರಕ್ಷಣೆ, ಮುಕ್ತ ಮತ್ತು ನ್ಯಾಯಸಮ್ಮತ ಸ್ಪರ್ಧೆ ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಕೆಲವು ಇ-ಕಾಮರ್ಸ್ ಘಟಕಗಳು ಗ್ರಾಹಕರ ಆಯ್ಕೆಯನ್ನು ಸೀಮಿತಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಪ್ಲಾಟ್ ಫಾರ್ಮ್ ನಲ್ಲಿ ಮಾರಾಟ ಮಾಡುವ ಒಬ್ಬ ಮಾರಾಟಗಾರ ಯಾವುದೇ ದಾಸ್ತಾನು ಅಥವಾ ಆದೇಶ ಪೂರೈಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಪ್ಲಾಟ್ಫಾರ್ಮ್ ನಿಂದ ನಿಯಂತ್ರಿಸಲ್ಪಡುವ ಇನ್ನೊಬ್ಬ ಮಾರಾಟಗಾರರೊಂದಿಗೆ ಫ್ಲ್ಯಾಷ್ ಅಥವಾ ಬ್ಯಾಕ್-ಟು-ಬ್ಯಾಕ್’ ಆದೇಶವನ್ನು ಹೊಂದಿರುತ್ತದೆ. ಹೀಗೆ ಕೆಲವು ರೀತಿಯ ಫ್ಲ್ಯಾಷ್ ಮಾರಾಟವನ್ನು ನಿಷೇಧಿಸುವ ಪ್ರಸ್ತಾಪವನ್ನು ಸಚಿವಾಲಯ ಮುಂದಿಟ್ಟಿದೆ.
ನಿರ್ಲಕ್ಷತನ ನಡವಳಿಕೆಯಿಂದಾಗಿ ಮಾರಾಟಗಾರರು ಸರಕು ಅಥವಾ ಸೇವೆ ತಲುಪಿಸಲು ವಿಫಲವಾದಾಗ ಗ್ರಾಹಕರಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆಯ ಹೊಣೆಗಾರಿಕೆ ಖಚಿತಪಡಿಸಲಾಗಿದೆ.
ತೃತೀಯ ಮಾರಾಟಗಾರರ ಸಾಂಪ್ರದಾಯಿಕ ಫ್ಲ್ಯಾಷ್ ಮಾರಾಟವನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿಷೇಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ – 2019 ರ ಅನ್ವಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ 24×7 ಸಮನ್ವಯಕ್ಕಾಗಿ ನೋಡಲ್ ಸಂಪರ್ಕ ವ್ಯಕ್ತಿಗಳ ನೇಮಕವನ್ನು ಶಿಫಾರಸು ಮಾಡಲಾಗಿದೆ.
ಇದು ಕುಂದುಕೊರತೆ ನಿವಾರಣಾ ಕಾರ್ಯವಿಧಾನವನ್ನು ಬಲಪಡಿಸುತ್ತದೆ. ಇದಲ್ಲದೆ, ಪ್ರತಿ ಇ-ಕಾಮರ್ಸ್ ಘಟಕದ ನೋಂದಣಿಗೆ ಪ್ರಸ್ತಾಪಿಸಲಾಗಿದೆ. ನಿಗದಿಪಡಿಸಿದ ನೋಂದಣಿ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ಮತ್ತು ಪ್ರತಿ ಆದೇಶದ ಇನ್‌ವಾಯ್ಸ್ ನಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಲಾಗಿದೆ.
ಇದು ನಿಜವಾದ ಘಟಕಗಳ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಗ್ರಾಹಕರು ವಹಿವಾಟು ನಡೆಸುವ ಮೊದಲು ಅದರ ನೈಜತೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ತಪ್ಪಾಗಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂದರೆ, ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ತಪ್ಪಾಗಿ ನಿರೂಪಿಸುವ ಮೂಲಕ ಸರಕು ಮತ್ತು ಸೇವೆ ಮಾರಾಟ ಮಾಡುವುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.