ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ 12 ಮಕ್ಕಳು ಸೇರಿದಂತೆ ಕನಿಷ್ಟ 45 ಮಂದಿ ಸಾವನ್ನಪ್ಪಿದ ದಾರುಣ ಘಟನೆಯು ಬಲ್ಕಾನ್ಸ್ನ ಉತ್ತರ ಮೆಸಡೋನಿಯಾದಲ್ಲಿ ಸಂಭವಿಸಿದೆ. ಇಂದು ಮುಂಜಾನೆ ಸುಮಾರಿಗೆ ಪಶ್ಚಿಮ ಬಲ್ಗೇರಿಯಾ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ.
ಅಗ್ನಿಯ ಕೆನ್ನಾಲಿಗೆಯಿಂದ ಹೊತ್ತು ಉರಿಯುತ್ತಿದ್ದ ಬಸ್ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾದ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಬಸ್ ಅಪಘಾತದಲ್ಲಿ 45 ಮಂದಿ ಸಾವನ್ನಪ್ಪಿರೋದು ಬಲ್ಕನ್ ದೇಶದ ಇತಿಹಾದಲ್ಲಿಯೇ ಅತ್ಯಂತ ಕರಾಳ ಬಸ್ ಅಪಘಾತ ಎಂದು ಬಣ್ಣಿಸಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಆಂತರಿಕ ಸಚಿವ ಬಾಯ್ಕೋ ರಾಶ್ಕೋವ್, ಬಸ್ನ ಒಳಗಡೆ ದೇಹಗಳು ಸುಟ್ಟು ಬೂದಿಯಾಗಿದೆ. ಇದು ಅತ್ಯಂತ ಭಯಾನಕವಾಗಿದೆ. ನಾನು ಈ ರೀತಿಯ ದುರಂತವನ್ನೇ ನೋಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸೋಫಿಯಾದಿಂದ ಪಶ್ಚಿಮಕ್ಕೆ 45ಕಿಮೀ ದೂರದಲ್ಲಿರುವ ಸ್ಟ್ರೂಮಾ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಮಳೆಯಿಂದ ಸಂಪೂರ್ಣ ಒದ್ದೆಯಾಗಿದ್ದ ರಸ್ತೆಯಲ್ಲಿ ಬಸ್ ಬೆಂಕಿಗೆ ಆಹುತಿಯಾದ ದೃಶ್ಯಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ.