ಮೈಸೂರು: ರಾಷ್ಟ್ರಧ್ವಜದ ಮಹತ್ವವನ್ನೇ ಪರಿಗಣಿಸದ ಕೇಂದ್ರ ಸರ್ಕಾರ ಬಲವಂತವಾಗಿ ಧ್ವಜ ಮಾರಾಟಕ್ಕೆ ಅಂಚೆ ಕಚೇರಿ ಮತ್ತು ಬ್ಯಾಂಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಿರಿಯ ರಂಗಕರ್ಮಿ ಹಾಗೂ ದ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಪ್ರಸನ್ನ ಹೆಗ್ಗೋಡು ಆರೋಪಿಸಿದ್ದಾರೆ.
ಬಲವಂತವಾಗಿ ಧ್ವಜ ಮಾರಾಟ ಮಾಡಲು ಕೇಂದ್ರ ಸರ್ಕಾರ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸ್ವದೇಶಿ ಬಾವುಟಕ್ಕೆ ಆದ್ಯತೆ ನೀಡದೆ ವಿದೇಶದಲ್ಲಿ ತಯಾರಿಸಲಾದ ಧ್ವಜಗಳನ್ನು ಬಲವಂತವಾಗಿ ಹಾರಿಸಲು ಮುಂದಾಗಿದೆ. ಖಾದಿ ಚಟುವಟಿಕೆ ನಂಬಿಕೊಂಡಿರುವ ಬಡ ನೇಕಾರರ ಬದುಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಕಚೇರಿ, ಪೋಸ್ಟ್ ಆಫೀಸ್, ಬ್ಯಾಂಕುಗಳ ಮೂಲಕ ವಿದೇಶಿ ಸಿಂಥೆಟಿಕ್ ವಸ್ತ್ರದಿಂದ ತಯಾರಿಸಲಾದ ಧ್ವಜವನ್ನು ಏಕೆ ಮಾರಾಟ ಮಾಡಿಸುತ್ತಿದ್ದೀರಿ. ಚೀನಾದಲ್ಲಿ ತಯಾರಾದ ರಾಷ್ಟ್ರಧ್ವಜ ಅಧಿಕೃತವಾಗಿ ಮಾರಾಟವಾಗುತ್ತಿದೆ ಎನ್ನುವ ಸುದ್ದಿ ಹರಡಿದೆ. ಇದು ನಿಜವೇ ಎಂದು ಪ್ರಸನ್ನ ಹೆಗ್ಗೋಡು ಪ್ರಶ್ನಿಸಿದ್ದಾರೆ.