ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ. ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್ ಭಾರಿ ಅಭಾವದಿಂದ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ ಅನೇಕ ದೇಶಗಳು ಸಹಾಯಹಸ್ತ ಚಾಚಿವೆ.
ಅಮೆರಿಕದಿಂದ ಭಾರತಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಲಾಗಿದೆ. ನ್ಯೂಯಾರ್ಕ್ ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5 ಟನ್ ಆಮ್ಲಜನಕ ಸಾಂದ್ರಕಗಳನ್ನು ಏರ್ ಇಂಡಿಯಾ ವಿಮಾನದಲ್ಲಿ ಕಳುಹಿಸಲಾಗಿದ್ದು ಸೋಮವಾರ ಮಧ್ಯಾಹ್ನದ ವೇಳೆಗೆ ದೆಹಲಿಗೆ ತಲುಪಲಿದೆ.
ಭಾರತದಲ್ಲಿ ಕೋವಿಡ್ ಬಿಕ್ಕಟ್ಟು ತೀವ್ರತರವಾಗಿದ್ದು ಆಕ್ಸಿಜನ್ ಕೊರತೆ ಕಂಡುಬಂದಿದೆ. ಕೊರತೆ ನಿವಾರಿಸಲು ಅಗತ್ಯ ವಸ್ತುಗಳನ್ನು ನೀಡುವುದಾಗಿ ಅಮೆರಿಕ ತಿಳಿಸಿದೆ. ಅಮೆರಿಕದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ಸಂದರ್ಭದಲ್ಲಿ ಭಾರತ ಸಹಾಯ ಮಾಡಿತ್ತು ಎಂದು ಸ್ಮರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಭಾರತಕ್ಕೆ ಅಗತ್ಯವಾದ ಆಮ್ಲಜನಕ ಸಾಂದ್ರಕ ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.