ಕೋಲ್ಕತ್ತಾ: ಶುಕ್ರವಾರ ಮಧ್ಯಾಹ್ನ ಬಂಗಾಳ-ಸಿಕ್ಕಿಂ ಗಡಿಯಲ್ಲಿ ಅವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾದ ನಂತರ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. 15 ಮಂದಿ ಪ್ರಯಾಣಿಕರೊಂದಿಗೆ ಸಿಲಿಗುರಿಯಿಂದ ಗ್ಯಾಂಗ್ ಟಕ್ ಗೆ ತೆರಳುತ್ತಿದ್ದ ಖಾಸಗಿ ಬಸ್ ತೀಸ್ತಾ ನದಿಗೆ ಬಿದ್ದಿದೆ.
ಬಸ್ ಸಿಕ್ಕಿಂನ ಗ್ಯಾಂಗ್ಟಾಕ್ ಗೆ ತೆರಳುತ್ತಿದ್ದಾಗ ಮಧ್ಯಾಹ್ನ 3:50 ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿರಬಹುದು.
ಮೂವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ರಂಗಪೋ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ರಂಗ್ಪೋ ಮತ್ತು ಸಿಂಗ್ಟಾಮ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಪೊಲೀಸರು, ಸ್ಥಳೀಯರು ಮತ್ತು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.