ಬೆಂಗಳೂರು: ಪ್ರತಿ ವರ್ಷ ಐದು ಉಚಿತ ಅಡುಗೆ ಸಿಲಿಂಡರ್, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಗರ್ಭಿಣಿಯರಿಗೆ 6000 ರೂ. ಭತ್ಯೆ ನೀಡುವುದಾಗಿ ಜೆಡಿಎಸ್ ಭರವಸೆ ನೀಡಿದೆ.
ಪ್ರಣಾಳಿಕೆ ರೂಪದಲ್ಲಿ 12 ಅಂಶಗಳ ಭರವಸೆಗಳನ್ನು ‘ಕರುನಾಡ ಜನತೆಗೆ ಜೆಡಿಎಸ್ ಪರಿಹಾರ’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪದ್ಮನಾಭನಗರದ ನಿವಾಸದಲ್ಲಿ ಶನಿವಾರ ಪಕ್ಷದ ಮಿನಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಘೋಷಿಸಿದ್ದಾರೆ.
ಪ್ರಮುಖವಾಗಿ ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರೂ. ನೀಡಲಾಗುವುದು. ಹೃದಯ, ಶ್ವಾಸಕೋಶ, ಯಕೃತ್ ಕಸಿಗೆ 24 ಗಂಟೆಯಲ್ಲಿ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಪ್ರೌಢಶಾಲೆ ಮಕ್ಕಳಿಗೆ ಸೈಕಲ್, ಪದವಿ ವಿದ್ಯಾರ್ಥಿಗಳಿಗೆ ಇ- ಮೊಪೈಡ್ ನೀಡಲಾಗುತ್ತದೆ. ವಿಧವಾ ವೇತನವನ್ನು 2500 ರೂ.ಗೆ ಹೆಚ್ಚಳ ಮಾಡಲಾಗುತ್ತದೆ. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಭತ್ಯೆ ನೀಡಲಾಗುವುದು. ಕನ್ನಡದಲ್ಲಿಯೇ ನೇಮಕಾತಿ ಪರೀಕ್ಷೆ ನಡೆಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಲಾಗಿದೆ.