ಮಳೆಗಾಲ ಬಂತು ಅಂದ್ರೆ ಸಾಕು ಸಾಂಕ್ರಾಮಿಕ ರೋಗಗಳು ಬಂದು ವಕ್ಕರಿಸಿಬಿಡುತ್ತದೆ. ಸುಡುವ ಬೇಸಿಗೆಯ ಶಾಖದಿಂದ ಮಳೆಗಾಲ ಬಿಡುವು ನೀಡುವುದರಿಂದ ನಮ್ಮ ದೇಹವು ಸೋಂಕುಗಳು ಮತ್ತು ರೋಗಗಳಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮುತುವರ್ಜಿ ವಹಿಸಬೇಕು. ಇದಕ್ಕಾಗಿಯೆ ಪ್ರಕೃತಿಯು ನಮಗೆ ಮಳೆಗಾಲದ ಕಾಯಿಲೆಗಳನ್ನು ದೂರವಿಡಲು ಪೌಷ್ಟಿಕಾಂಶದ ಆಹಾರಗಳನ್ನು ನೀಡುತ್ತದೆ.
ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳನ್ನು ತಪ್ಪಿಸಲು ಮಳೆಗಾಲದಲ್ಲಿ ಯಾವ ಆಹಾರವನ್ನು ಸೇವಿಸಬಹುದು ಎಂಬುದನ್ನು ಹಂಚಿಕೊಂಡಿದ್ದಾರೆ.
ಆಯುರ್ವೇದದಲ್ಲಿ ತುಳಸಿಯು ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ನೈಸರ್ಗಿಕ ರೋಗನಿರೋಧಕ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಪ್ರಮುಖ ಅಂಶಗಳಾದ ಸಹಾಯಕ ಕೋಶಗಳು ಮತ್ತು ರೋಗ ನಿರೋಧಕ ಕೋಶಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಈ ಜೀವಕೋಶಗಳು ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದು ನಮ್ಮನ್ನು ಮಳೆಗಾಲದಲ್ಲಿ ಆರೋಗ್ಯವಾಗಿಡುತ್ತದೆ. ತುಳಸಿ ಎಲೆಗಳನ್ನು ನೇರವಾಗಿ ಸೇವಿಸಬಹುದು, ಅಥವಾ ಚಹಾದ ಜೊತೆಯು ಕುದಿಸಬಹುದು. ಇದರ ಜೊತೆ ಸೂಪ್ ಮಾಡಿಯು ಕುಡಿಯುವುದರಿಂದ ಇದರ ಪ್ರಯೋಜನವನ್ನು ಪಡೆಯಬಹುದು.
ತಜ್ಞರ ಪ್ರಕಾರ ಮತ್ತೊಂದು ಪ್ರಬಲ ಆಹಾರವೆಂದರೆ ಶುಂಠಿ. ಇದು ಉರಿಯೂತದ ಮತ್ತು ರೋಗ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಶುಂಠಿಯು ದೇಹದ ಅಂಗಾಂಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ ಶೀತ ಮತ್ತು ಜ್ವರವನ್ನು ದೂರವಿರಿಸಲು ಇದು ಹೆಚ್ಚು ಸಹಕಾರಿಯಾಗುತ್ತದೆ.ನಿಮ್ಮ ಚಹಾ ಅಥವಾ ಸೂಪ್‌ಗೆ ತುರಿದ ಶುಂಠಿಯನ್ನು ಸೇರಿಸಬಹುದು ಎಂದು ಲವ್ನೀತ್ ಬಾತ್ರಾ ಹೇಳಿದ್ದಾರೆ. ಹೀಗೆ ಮಾಡುವುದರಿಂದ ಶೀತ ಮತ್ತು ಜ್ವರ ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು.
ಇನ್ನು ಕರಿಮೆಣಸನ್ನು ಸಾಮಾನ್ಯವಾಗಿ ಮಸಾಲೆಗಳ ರಾಜ ಎಂದು ಕರೆಯಲಾಗುತ್ತದೆ. ಇದು ಸಹ ಮಾನ್ಸೂನ್ ಋತುವಿನಲ್ಲಿ ಮತ್ತೊಂದು ಪ್ರಬಲ ಆಹಾರ ಪದಾರ್ಥವಾಗಿದೆ.
ಇದು ಪೈಪರಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ರೋಗ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಕರಿಮೆಣಸಿನ ನಿಯಮಿತ ಸೇವನೆಯು ನಿಮ್ಮ ದೇಹದ ರಕ್ಷಣಾ ಕಾರ್ಯವಿಧಾನಗಳನ್ನು ಹೆಚ್ಚಿಸುತ್ತದೆ. ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಇದರ ಜೊತೆ ನಿಮ್ಮ ಆಹಾರಗಳ ಜೊತೆ ಕರಿಮೆಣಸನ್ನು ಮಿಶ್ರಣ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಜೊತೆಗೆ ಪರಿಮಳವನ್ನು ಹೆಚ್ಚಿಸಬಹುದು.
ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾದ ಕರಿಬೇವು ಸಹ ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕರಿಬೇವಿನ ಎಲೆಗಳನ್ನು ನಿಮ್ಮ ದೈನಂದಿನ ಅಡುಗೆಯಲ್ಲಿ ವಿಶೇಷವಾಗಿ ಸೂಪ್ ಮತ್ತು ಮಸೂರ ಭಕ್ಷ್ಯಗಳಲ್ಲಿ ಬಳಸಬಹುದು. ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ನಿಂಬೆ ದೇಹದ ರಕ್ಷಣೆಯನ್ನು ಬಲಪಡಿಸಲು ಮತ್ತು ಹಲವಾರು ಕಾಯಿಲೆಗಳನ್ನು ತಡೆಗಟ್ಟಲು ಹೆಚ್ಚು ಸಹಾಯಕವಾಗುತ್ತೆ. ನಿಂಬೆ ರಸವನ್ನು ಬೆಚ್ಚಗಿನ ನೀರಿಗೆ ಹಾಕಿದ್ರೆ ಅಥವಾ ಸಲಾಡ್‌ಗಳ ಮೇಲೆ ಡ್ರೆಸ್ಸಿಂಗ್ ಆಗಿ ಬಳಸುವುದರಿಂದ ಇದರ ಪ್ರಯೋಜನಗಳನ್ನು ಪಡೆಯಬಹುದು.