
ಟೊಕಿಯೋ: ಕೋಸ್ಟ್ ಗಾರ್ಡ್ DHC-8-315Q ವಿಮಾನವು ಜಪಾನ್ ಏರ್‌ಲೈನ್ಸ್ ವಿಮಾನಕ್ಕೆ ಡಿಕ್ಕಿ ಹೊಡೆದು ಆರು ಪ್ರಯಾಣಿಕರಲ್ಲಿ ಐವರು ಸಾವನ್ನಪ್ಪಿದ್ದಾರೆ.
ಜಪಾನ್ ಏರ್ಲೈನ್ಸ್ ವಿಮಾನವು ಘರ್ಷಣೆಯ ನಂತರ ಜ್ವಾಲೆಯಲ್ಲಿ ಸ್ಫೋಟಿಸಿದೆ. 8 ಮಕ್ಕಳು ಮತ್ತು 12 ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 379 ವ್ಯಕ್ತಿಗಳನ್ನು ಸ್ಥಳಾಂತರಿಸಲಾಗಿದೆ.
ಉತ್ತರ ಜಪಾನಿನ ಹೊಕ್ಕೈಡೊ ದ್ವೀಪದಲ್ಲಿರುವ ಸಪೊರೊ ವಿಮಾನ ನಿಲ್ದಾಣದಿಂದ ಆಗಮಿಸುತ್ತಿದ್ದ ಏರ್‌ಬಸ್ ವಿಮಾನವು ತೀವ್ರ ಹಾನಿಗೀಡಾಗಿದೆ. ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಹನೇಡಾ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಧ್ಯ ಜಪಾನ್‌ನಲ್ಲಿ ಪ್ರಬಲ ಭೂಕಂಪದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಭೂಕಂಪದಲ್ಲಿ ಕನಿಷ್ಠ 30 ಜನ ಬಲಿಯಾಗಿದ್ದಾರೆ. ಭೂಕಂಪದ ನಂತರ ರಕ್ಷಣಾ ಕಾರ್ಯಗಳಿಗೆ ಕೋಸ್ಟ್ ಗಾರ್ಡ್ ವಿಮಾನ ಬಳಸಿಕೊಳ್ಳಲಾಗಿತ್ತು.
ದುರದೃಷ್ಟಕರ ಕೋಸ್ಟ್ ಗಾರ್ಡ್ ವಿಮಾನವು ಆಗಷ್ಟೇ ಆಗಮಿಸಿತ್ತು. ಘಟನೆ ಹಿನ್ನೆಲೆಯಲ್ಲಿ ಹನೇಡಾ ವಿಮಾನ ನಿಲ್ದಾಣದ ಎಲ್ಲಾ ರನ್‌ವೇಗಳನ್ನು ಮುಚ್ಚಲಾಗಿದ್ದು, ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ.