ಬೆಂಗಳೂರು: ಸಾಂಪ್ರದಾಯಿಕ ಮೀನುಗಾರಿಕೆಗೆ ವಿಶೇಷ ಒತ್ತು ನೀಡಲಾಗಿದ್ದು, 56 ಸ್ಥಳಗಳಲ್ಲಿ ಕೃತಕ ಬಂಡೆಗಳ ಸ್ಥಾಪನೆ ಮಾಡಲಾಗುವುದು. ಇದು ಅಪರೂಪದ ಮೀನಿನ ಸಂತತಿಗಳ ಉಳಿವಿಗೆ ಸಹಕಾರಿಯಾಗಲಿದೆ.
ಕೆಲ ವರ್ಷಗಳಿಂದ ಸಮುದ್ರದಲ್ಲಿ ಮತ್ಸ್ಯಕಾಮ ಎದುರಾಗಿದೆ. ಬೆಳಕಿನ ಮೀನುಗಾರಿಕೆ, ಬುಲ್ ಟ್ರಾಲ್ ಸೇರಿ ಅವೈಜ್ಞಾನಿಕ ಪದ್ಧತಿಯ ಮೀನುಗಾರಿಕೆಯಿಂದ ಸಾಂಪ್ರದಾಯಿಕ ರೀತಿ ಮೀನು ನಡೆಸುವವರಿಗೆ ಮೀನು ಸಿಗುತ್ತಿಲ್ಲ. ಅಂತಹವರ ಅನುಕೂಲಕ್ಕೆ ಮೀನುಗಾರಿಕೆ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ 25 ಕಡೆ ಮತ್ತು ಉಡುಪಿಯ 31 ಕಡೆ ಸೇರಿ ಒಟ್ಟು 56 ಸ್ಥಳಗಳಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಕೃತಕ ಬಂಡೆಗಳನ್ನು ಇಟ್ಟು ಮೀನು ಸಂತತಿ ಹೆಚ್ಚಿಸುವ ಉದ್ದೇಶ ಹೊಂದಿದೆ.
ಕೃತಕ ಬಂಡೆಗಳ ಸ್ಥಾಪನೆಯಿಂದ ಅಪರೂಪದ ಮೀನಿನ ಸಂತತಿಗಳ ಉಳಿವಿಗೆ ಸಹಕಾರಿಯಾಗಲಿದೆ. ಮೀನಿನ ಸಂತಾನೋತ್ಪತ್ತಿ ಪೂರಕ ವಾತಾವರಣ ಸಿಕ್ಕರೆ, ಆಳ ಸಮುದ್ರದ ಮೀನುಗಳು ತೀರಕ್ಕೆ ಸಮೀಪದ ಪ್ರದೇಶಕ್ಕೆ ಬಂದು ಸಂತಾನೋತ್ಪತ್ತಿ ನಡೆಸುತ್ತವೆ. ಇದರಿಂದ ಮೀನುಗಾರರಿಗೂ ಅನುಕೂಲವಾಗುತ್ತದೆ.