ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ದೈತ್ಯ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಭಾನುವಾರ ರಾಜ್ಯದ ಕರಾವಳಿಯ ಸಮುದ್ರದಲ್ಲಿ ಸುಮಾರು 1,500 ಕೆಜಿ ತೂಕದ ದೈತ್ಯ ಮೀನನ್ನು ಮೀನುಗಾರರು ಹಿಡಿದಿದ್ದಾರೆ.
ಮೂರು ದಿನಗಳ ಹಿಂದೆ ಸಮುದ್ರಕ್ಕೆ ಇಳಿದಿದ್ದ ಮೀನುಗಾರರು ದೊಡ್ಡ ಮೀನಿನೊಂದಿಗೆ ಕೃಷ್ಣೆಯ ಮಚಲಿಪಟ್ಟಣದ ಗಿಲಕಲದಿಂಡಿಗೆ ಬಂದರು. ಟೇಕು ಮೀನು ಎಂದು ಕರೆಯುವ ದೈತ್ಯ ಮೀನನ್ನು ನೋಡಿ ದಂಗಾದ ಮೀನುಗಾರರು, ಅದನ್ನು ದಡಕ್ಕೆ ತರಲು ಸಹಾಯಕೋರಿದ್ದರು. ಕ್ರೇನ್ ಸಹಾಯದಿಂದ ಮೀನನ್ನು ದಡಕ್ಕೆ ತರಲಾಯಿತು.
ಮೀನನ್ನು ಹತ್ತಿರದಿಂದ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. ಅನೇಕರು ತಮ್ಮ ಮೊಬೈಲ್ ನಲ್ಲಿ ಮೀನಿನ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಈ ಮೀನನ್ನು ಚೆನ್ನೈನ ವ್ಯಾಪಾರಿಗಳು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. 2020 ರಲ್ಲಿ ಸುಮಾರು ಮೂರು ಟನ್ ತೂಕದ ದೈತ್ಯ ಸ್ಟಿಂಗ್ರೇ ಮೀನನ್ನು ಅದೇ ಜಿಲ್ಲೆಯ ಮೀನುಗಾರರು ಸೆರೆಹಿಡಿದಿದ್ದರು.