ಮುಂಬೈ: ಅತಿ ದೊಡ್ಡ ಕೊಳಗೇರಿ ಪ್ರದೇಶವಾಗಿರುವ ಮುಂಬೈನ ಧಾರಾವಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೋನಾ ವೈರಸ್ ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ಮಾಹಿತಿ ನೀಡಿದ್ದಾರೆ.
ವಿಶ್ವದ ಅತಿ ಹೆಚ್ಚು ಜನದಟ್ಟಣೆಯ ಸ್ಲಂಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿ ಸ್ಲಂನಲ್ಲಿ ಏಪ್ರಿಲ್ 1 ರ ನಂತರ ಇದೇ ಮೊದಲ ಬಾರಿಗೆ ಒಂದೇ ಒಂದು ಪ್ರಕರಣ ಕೂಡ ದಾಖಲಾಗಿಲ್ಲ. ಸದ್ಯಕ್ಕೆ ಈ ಪ್ರದೇಶದಲ್ಲಿ 12 ಸಕ್ರಿಯ ಪ್ರಕರಣಗಳಿದ್ದು, 8 ಜನ ಪ್ರತ್ಯೇಕ ವಾಸದಲ್ಲಿದ್ದಾರೆ. ನಾಲ್ವರು ಸೋಂಕಿತರು ಕೋವಿಡ್ ಆರೈಕೆ ಕೇಂದ್ರದಲ್ಲಿದ್ದರೆ ಎಂದು ಹೇಳಲಾಗಿದೆ.
2.5 ಚದರ ಕಿಲೋಮೀಟರ್ ವ್ಯಾಪ್ತಿಯ ಈ ಪ್ರದೇಶದಲ್ಲಿ 6.5 ಲಕ್ಷ ಜನರು ವಾಸವಾಗಿದ್ದಾರೆ. ಏಪ್ರಿಲ್ ನಲ್ಲಿ ಸೋಂಕು ಕಾಣಿಸಿಕೊಂಡಾಗ ಭಾರೀ ಪ್ರಮಾಣದಲ್ಲಿ ಹರಡಿ ಆತಂಕ ಉಂಟು ಮಾಡಿತ್ತು. ನಂತರದಲ್ಲಿ ನಿಧಾನವಾಗಿ ಕಡಿಮೆಯಾಗಿ ಇವತ್ತು ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.