ಬೆಂಗಳೂರಿಗೆ ಹೊರಟಿದ್ದ ಆಕಾಸ ಏರ್ ವಿಮಾನದಲ್ಲಿ ಬೀಡಿ ಸೇದಿದ 56 ವರ್ಷದ ವ್ಯಕ್ತಿಯೊಬ್ಬರನ್ನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಂಧಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಏರ್‌ಲೈನ್‌ನ ಡ್ಯೂಟಿ ಮ್ಯಾನೇಜರ್ ತಕ್ಷಣವೇ ಕೆಐಎ ಪೊಲೀಸರಿಗೆ ದೂರು ನೀಡಿದ್ದು, ಪ್ರಯಾಣಿಕನನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ ಸಹ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ.
ರಾಜಸ್ಥಾನದ ಮಾರ್ವಾರ್ ಪ್ರದೇಶದ ಪ್ರವೀಣ್ ಕುಮಾರ್ ಎಂದು ಗುರುತಿಸಲಾದ ವ್ಯಕ್ತಿ ಅಹಮದಾಬಾದ್‌ನಲ್ಲಿ ವಿಮಾನ ಏರಿದ್ದರು. ವಿಮಾನದ ವಾಶ್ ರೂಂನಲ್ಲಿ ಧೂಮಪಾನ ಮಾಡುತ್ತಿದ್ದ ಆತನನ್ನು ಏರ್‌ಲೈನ್‌ನ ಸಿಬ್ಬಂದಿ ಕಂಡುಹಿಡಿದರು.
ಘಟನೆಯ ನಂತರ ಪ್ರವೀಣ್ ಕುಮಾರ್ ನನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಯಿತು. ಪೊಲೀಸರೊಂದಿಗಿನ ವಾಗ್ವಾದದ ವೇಳೆ ಆರೋಪಿಯು ತಾನು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡ್ತಿದ್ದು ಈ ನಿಯಮ ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣ ಮಾಡ್ತಿದ್ದ ವ್ಯಕ್ತಿ ವಾಶ್ ರೂಂ ನಲ್ಲಿ ಬೀಡಿ ಸೇವಿಸ್ತಿದ್ದನಂತೆ. ಅದರಂತೆ ಇಲ್ಲಿಯೂ ಹಾಗೆ ಮಾಡಿದ್ದೆ, ಈ ನಿಯಮದ ಬಗ್ಗೆ ನನಗೆ ಗೊತ್ತಿರಲಿಲ್ಲ ಎಂದಿದ್ದಾನೆ.
1937 ರ ಭಾರತೀಯ ಏರ್‌ಕ್ರಾಫ್ಟ್ ನಿಯಮಗಳ ಅಡಿಯಲ್ಲಿ ಇ-ಸಿಗರೆಟ್‌ಗಳ ಬಳಕೆಯನ್ನು ಒಳಗೊಂಡಂತೆ ಧೂಮಪಾನವನ್ನು ಕಟ್ಟುನಿಟ್ಟಾಗಿ ವಿಮಾನಗಳಲ್ಲಿ ನಿಷೇಧಿಸಲಾಗಿದೆ.