ಬೆಂಗಳೂರು: ವಕ್ಫ್ ಆಸ್ತಿಗಳ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಉದ್ದೇಶದಿಂದ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ವಕ್ಪ್ ಅದಾಲತ್ ನಡೆಸಲು ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾಗಿದ್ದಾರೆ.
ಜೂನ್ 24ರ ಸೋಮವಾರ ಬೀದರ್ ನಲ್ಲಿ ಮೊದಲ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅದಾಲತ್ ನಲ್ಲಿ ಜಿಲ್ಲಾಮಟ್ಟದಲ್ಲಿ ಮುತವಲ್ಲಿ, ವಕ್ಫ್ ಸಮಿತಿಗಳ ಕುಂದು ಕೊರತೆ ಆಲಿಸಲಾಗುವುದು. ಅನೇಕ ವರ್ಷಗಳಿಂದ ಇತ್ಯರ್ಥವಾಗದ ವಕ್ಪ್ ಆಸ್ತಿಗಳಿಗೆ ಖಾತೆ ಮಾಡಿಕೊಡುವ ಬಗ್ಗೆ ಅರ್ಜಿ ಸ್ವೀಕರಿಸಲಾಗುತ್ತದೆ.
ಸಭೆಯ ಮುಂದುವರೆದ ಭಾಗವಾಗಿ ಜೂನ್ 25ರಂದು ಜಿಲ್ಲಾಧಿಕಾರಿ, ಎಸ್ಪಿ, ಉಪ ವಿಭಾಗಾಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಬೋರ್ಡ್ ಅಧಿಕಾರಿಗಳ ಜೊತೆಗೆ ಸಚಿವರು ಸಭೆ ನಡೆಸಲಿದ್ದಾರೆ.
ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಬೀದರ್ ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಫಿರೋಜ್ ಖಾನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ತಿಂಗಳಿಗೊಮ್ಮೆ ವಕ್ಪ್ ಅದಾಲತ್ ನಡೆಸಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.