ಬೆಂಗಳೂರು: ಪ್ರೀತಿಸಿ ಮದುವೆಯಾಗಿರುವ ವಿಚಾರ ಮುಂದಿಟ್ಟು ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿ ಮೊದಲ ರಾತ್ರಿಗೆ ಸಜ್ಜಾಗಿದ್ದ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಬೀರಯ್ಯನ ಪಾಳ್ಯ ನಿವಾಸಿ ಮಧುಸೂದನ್(27) ಬಂಧಿತ ಆರೋಪಿ. ಆತನ ಮೊದಲ ಪತ್ನಿ ಪುಷ್ಪಲತಾ ಗಂಡನ ವಿರುದ್ಧ ದೂರು ನೀಡಿ ಜೈಲಿಗೆ ಕಳುಹಿಸಿದ್ದಾಳೆ.
ಪುಷ್ಪಲತಾ ಮತ್ತು ಮಧುಸೂದನ್ ಒಂದೇ ಗ್ರಾಮದವರಾಗಿದ್ದು ಇಬ್ಬರೂ ಪ್ರೀತಿಸಿದ್ದರು. ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಜನವರಿ 20 ರಂದು ಸಂಬಂಧಿಕರೊಂದಿಗೆ ಸವದತ್ತಿಗೆ ಹೋಗಿದ್ದ ಸಂದರ್ಭದಲ್ಲಿ ಮಧುಸೂದನ್ ಪುಷ್ಪಲತಾ ಮದುವೆಯಾಗಿದ್ದು, ದಂಪತಿ ತೋಟದಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರನ್ನು ಮಧುಸೂದನ್ ಮನೆಯವರು ಊರಿಗೆ ಕರೆದುಕೊಂಡು ಹೋಗಿದ್ದರು. ಪುಷ್ಪಲತಾಗೆ ತವರುಮನೆಯಿಂದ ಆಸ್ತಿ, ಹಣ ತರುವಂತೆ ಕಿರುಕುಳ ನೀಡಿದ್ದಾರೆ. ಬಳಿಕ ಮನೆಯಿಂದ ದಂಪತಿಯನ್ನು ಹೊರಹಾಕಿದ್ದಾರೆ.
ನಂತರ ಮತ್ತೆ ತೋಟದಗುಡ್ಡದಹಳ್ಳಿ ಬಾಡಿಗೆ ಮನೆಯಲ್ಲಿ ದಂಪತಿ ಜೀವನ ಆರಂಭಿಸಿದ್ದಾರೆ. ಈ ನಡುವೆ ಫೋನ್ ನಂಬರ್ ಬದಲಿಸಿದ ಮಧುಸೂದನ್ ಪತ್ನಿ ಪುಷ್ಪಲತಾಗೆ ಗೊತ್ತಾಗದಂತೆ ಪೋಷಕರೊಂದಿಗೆ ಸೇರಿ ಗೌರಿಬಿದನೂರಿನ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಡಿಸೆಂಬರ್ 2 ರಂದು ನಿಗದಿಯಾಗಿದ್ದ ಮದುವೆಯನ್ನು ಇಲ್ಲದ ನೆಪ ಹೇಳಿ ನವೆಂಬರ್ 25 ರಂದೇ ಮಾಡಲಾಗಿದೆ. ಈತ ಮತ್ತೊಂದು ಮದುವೆಯಾದ ವಿಷಯ ತಿಳಿದ ಪುಷ್ಪಲತಾ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸೆಂಬರ್ 6 ರಂದು ಗೌರಿಬಿದನೂರಿನ ಗಂಗಾನಗರದಲ್ಲಿರುವ ಎರಡನೇ ಪತ್ನಿ ಮನೆಗೆ ಹೋದಾಗ ಮೊದಲ ರಾತ್ರಿಗೆ ಮೊದಲು ಸತ್ಯನಾರಾಯಣ ಪೂಜೆ ಇಟ್ಟುಕೊಂಡಿರುವುದು ಗೊತ್ತಾಗಿದೆ. ಗಂಡನ ವಿರುದ್ಧ ಪುಷ್ಪಲತಾ ದೂರು ನೀಡಿ ಜೈಲಿಗೆ ಕಳಿಸಿದ್ದಾರೆ ಎಂದು ಹೇಳಲಾಗಿದೆ.