ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು 39 ಸದಸ್ಯರ ಸಂಸದೀಯ ಸಮಿತಿಯ ಮೊದಲ ಸಭೆಯು ಜನವರಿ 8ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಈ ಪ್ರಮುಖ ಚುನಾವಣಾ ಸುಧಾರಣಾ ಉಪಕ್ರಮದ ಕುರಿತು ರಾಷ್ಟ್ರವ್ಯಾಪಿ ಚರ್ಚೆಗಳಿಗೆ ನಾಂದಿ ಹಾಡಲಿದೆ. ಸಂಸತ್ತಿನ ಮೂಲಗಳ ಪ್ರಕಾರ, ಬಿಜೆಪಿ ಸದಸ್ಯ ಪಿ.ಪಿ. ಚೌಧರಿ ಅಧ್ಯಕ್ಷತೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಾಗಿ ಮಸೂದೆಗಳ ಜಂಟಿ ಸಮಿತಿಯ ಮೊದಲ ಸಭೆಯು ಪರಿಚಯಾತ್ಮಕ ಸಭೆಯಾಗಿದ್ದು, ಅಧಿಕಾರಿಗಳು ಎರಡು ಮಸೂದೆಗಳ ಕುರಿತು ಸಮಿತಿಗೆ ವಿವರಿಸುವ ಸಾಧ್ಯತೆಯಿದೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು 39 ಸದಸ್ಯರ ಸಂಸದೀಯ ಸಮಿತಿ ರಚನೆ
ಲೋಕಸಭೆಯಿಂದ 27 ಮತ್ತು ರಾಜ್ಯಸಭೆಯ 12 ಸದಸ್ಯರನ್ನು ಸಮಿತಿಯು ಹೊಂದಿದೆ. ಹಿರಿಯ ಬಿಜೆಪಿ ನಾಯಕ ಮತ್ತು ಸಂಸದ ಪಿ.ಪಿ. ಚೌಧರಿ ಅವರನ್ನು ಜಂಟಿ ಸಂಸದೀಯ ಸಮಿತಿಯ(ಜೆಪಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಲೋಕಸಭೆಯ ಸದಸ್ಯರು: ಸಿ.ಎಂ. ರಮೇಶ್, ಬಾನ್ಸುರಿ ಸ್ವರಾಜ್, ಪರಶೋತ್ತಮ್ ರೂಪಾಲಾ, ಅನುರಾಗ್ ಸಿಂಗ್ ಠಾಕೂರ್, ವಿಷ್ಣು ದಯಾಳ್ ರಾಮ್, ಭರ್ತೃಹರಿ ಮಹತಾಬ್, ಸಂಬಿತ್ ಪಾತ್ರ, ಅನಿಲ್ ಬಲುನಿ, ವಿಷ್ಣು ದತ್ತ್ ಶರ್ಮಾ, ಬೈಜಯಂತ್ ಪಾಂಡಾ, ಸಂಜಯ್ ಜೈಸ್ವಾಲ್, ಪ್ರಿಯಾಂಕಾ ಗಾಂಧಿ ವಾದ್ರಾ, ಮನೀಶ್ ತಿವಾರಿ, ಸುಖದೇವ ಭಗತ್, ಧರ್ಮೇಂದ್ರ ಯಾದವ್, ಛೋಟೆಲಾಲ್, ಕಲ್ಯಾಣ್ ಬ್ಯಾನರ್ಜಿ, ಟಿ.ಎಂ. ಸೆಲ್ವಗಣಪತಿ, ಜಿ ಎಂ ಹರೀಶ್ ಬಾಲಯೋಗಿ, ಅನಿಲ್ ಯಶವಂತ ದೇಸಾಯಿ, ಸುಪ್ರಿಯಾ ಸುಳೆ, ಶ್ರೀಕಾಂತ್ ಏಕನಾಥ್ ಶಿಂಧೆ, ಶಾಂಭವಿ ಚೌಧರಿ, ಕೆ ರಾಧಾಕೃಷ್ಣನ್, ಚಂದನ್ ಚೌಹಾಣ್ ಮತ್ತು ಬಾಲಶೌರಿ ವಲ್ಲಭನೇನಿ.
ರಾಜ್ಯಸಭೆಯ ಸದಸ್ಯರು: ಘನಶ್ಯಾಮ್ ತಿವಾರಿ, ಭುವನೇಶ್ವರ ಕಲಿತಾ, ಕೆ. ಲಕ್ಷ್ಮಣ್, ಕವಿತಾ ಪಾಟಿದಾರ್, ಸಂಜಯ್ ಕುಮಾರ್ ಝಾ, ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ಬಾಲಕೃಷ್ಣ ವಾಸ್ನಿಕ್, ಸಾಕೇತ್ ಗೋಖಲೆ, ಪಿ ವಿಲ್ಸನ್, ಸಂಜಯ್ ಸಿಂಗ್, ಮಾನಸ್ ರಂಜನ್ ಮಂಗರಾಜ್ ಮತ್ತು ವಿ ವಿಜಯಸಾಯಿ ರೆಡ್ಡಿ.
ಕಳೆದ ವಾರ ಸಂಸತ್ತಿನಲ್ಲಿ ಏಕಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ಸಾಂವಿಧಾನಿಕ(129 ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಮೊಟ್ಟಮೊದಲಿಗೆ ಇ-ಮತದಾನದ ಮೂಲಕ ಪ್ರಸ್ತಾವನೆಯನ್ನು ಬಹುಮತದೊಂದಿಗೆ ಅಂಗೀಕರಿಸಲಾಯಿತು. ಮಸೂದೆಯ ಪರವಾಗಿ 269 ಮತಗಳು ಚಲಾವಣೆಗೊಂಡರೆ, ವಿರೋಧವಾಗಿ 198 ಮತಗಳು ಚಲಾವಣೆಯಾದವು.