ಬೋಯಿಂಗ್-777 ವಿಮಾನದ ಹಿರಿಯ ಪೈಲಟ್ ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು ಉತ್ತರ ಧ್ರುವದ(ನಾರ್ಥ್ಪೋಲ್) ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್ ಆಗಿದ್ದು, ಸುಮಾರು 16,000 ಕಿಲೋಮೀಟರ್ಗಳ ದಾಖಲೆಯ ಅಂತರವನ್ನು ಕ್ರಮಿಸಿದ್ದಾರೆ. ಈ ಕಾರಣಕ್ಕೆ ಅವರು ಎಸ್ಎಫ್ಒ ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
2021ರಲ್ಲಿ ಮೊದಲ ಬಾರಿಗೆ ಜೋಯಾ ಅಗರ್ವಾಲ್ ನೇತೃತ್ವದ ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು ಯುಎಸ್ನ ಸ್ಯಾನ್ ಫ್ರಾನ್ಸಿಸ್ಕೊನಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಮೂಲಕ ವಿಶ್ವದ ಅತಿ ಉದ್ದದ ವಿಮಾನ ಮಾರ್ಗ ಕ್ರಮಿಸಿತ್ತು.
ಯುಎಸ್ ಮೂಲದ ಏವಿಯೇಷನ್ ಮ್ಯೂಸಿಯಂ, ಏರ್ ಇಂಡಿಯಾದ ಮಹಿಳಾ ಪೈಲಟ್ಗಳ ಸಾಧನೆಯಿಂದ ಪ್ರಭಾವಿತವಾಗಿದ್ದು, ಹೀಗಾಗಿ ತಮ್ಮ ಮ್ಯೂಸಿಯಂನಲ್ಲಿ ಸ್ಥಾನವನ್ನು ನೀಡಿದೆ. ನಾನು ಅಲ್ಲಿರುವ ಏಕೈಕ ಜೀವಂತ ವ್ಯಕ್ತಿ ಎಂದು ನೋಡಿ ಆಶ್ಚರ್ಯಚಕಿತಳಾದೆ, ನನ್ನನ್ನು ಗುರುತಿಸಿರುವುದಕ್ಕೆ ವಿನಮ್ರಳಾಗಿದ್ದೇನೆ. ನಾನು ಯುಎಸ್ ನಲ್ಲಿರುವ ಪ್ರತಿಷ್ಠಿತ ವಾಯುಯಾನ ವಸ್ತುಸಂಗ್ರಹಾಲಯದ ಭಾಗವಾಗಿದ್ದೇನೆ ಎಂದು ನನಗೆ ನಂಬಲಾಗುತ್ತಿಲ್ಲ ಎಂದು ಕ್ಯಾಪ್ಟನ್ ಜೋಯಾ ತಿಳಿಸಿದ್ದಾರೆ.
ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಖುಷಿ ಹಂಚಿಕೊಂಡರು. ಅಮೇರಿಕಾದ ಮ್ಯೂಸಿಯಂನಲ್ಲಿರುವ ಮೊದಲ ಭಾರತೀಯ ಮಹಿಳೆ ನಾನೇ ಎಂದು ನಂಬಲು ಸಾಧ್ಯವಿಲ್ಲ, ಎಂಟು ವರ್ಷದ ಹುಡುಗಿ ಇದ್ದಾಗ ಮನೆ ಟೆರೇಸ್ ಮೇಲೆ ಕುಳಿತು ನಕ್ಷತ್ರಗಳನ್ನು ನೋಡುತ್ತಾ ಮತ್ತು ಪೈಲಟ್ ಆಗುವ ಕನಸು ಕಾಣುತ್ತಿದ್ದೆ. ಇಂದು ಅಮೇರಿಕಾ ತಮ್ಮ ಮ್ಯೂಸಿಯಂಗಾಗಿ ಭಾರತೀಯ ಮಹಿಳೆಯನ್ನು ಗುರುತಿಸಿರುವುದು ಗೌರವವಾಗಿದೆ. ಇದು ನನಗೆ ಮತ್ತು ನನ್ನ ದೇಶಕ್ಕೆ ಉತ್ತಮ ಕ್ಷಣವಾಗಿದೆ ಎಂದು ಕ್ಯಾಪ್ಟನ್ ಜೋಯಾ ಹೇಳಿದರು.