ತಿರುವನಂತಪುರ: ಉದ್ಯಮಿಯೊಬ್ಬರು 100 ಕೋಟಿ ರೂ. ಮೌಲ್ಯದ ಏರ್ ಬಸ್ ಹೆಲಿಕಾಪ್ಟರ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಹೀಗೆ ಹೇಳಿದ ಬಳಿಕ ನಿಮಗೆ ಮುಖೇಶ್ ಅಂಬಾನಿ, ಗೌತಮ್ ಅದಾನಿ ಇಲ್ಲವೇ ರತನ್ ಟಾಟಾ ಅವರ ಹೆಸರು ನೆನಪಾಗಬಹುದು.
ಆದರೆ ಇವರ್ಯಾರೂ ಅಲ್ಲ, ಬದಲಿಗೆ ತಿರುವನಂತಪುರದ ಆರ್ ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ. ರವಿ ಪಿಳೈ ಅವರು 100 ಕೋಟಿ ರೂ. ಮೌಲ್ಯದ ಏರ್ ಬಸ್ ಹೆಲಿಕಾಪ್ಟರ್‌ನ ಮಾಲೀಕರಾಗಿದ್ದಾರೆ. ಈ ಮೂಲಕ ದೇಶದಲ್ಲೇ ಅತ್ಯಂತ ಐಷಾರಾಮಿ ಚಾಪರ್ ಅನ್ನು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಪ್ರಸ್ತುತ 1,500 ಎಚ್145 ಹೆಲಿಕಾಪ್ಟರ್ ಪ್ರಪಂಚದಾದ್ಯಂತ ಹಾರುತ್ತಿವೆ. ಇದೀಗ ಈ ಹೆಲಿಕಾಪ್ಟರ್‌ನ ಸೇರ್ಪಡೆಯು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎನ್ನಲಾಗಿದೆ. 68 ವರ್ಷದ ಬಿಲಿಯನೇರ್ ಪ್ರಸ್ತುತ 2.5 ಶತಕೋಟಿ ಡಾಲರ್ (19,10,18,750.00 ರೂ.) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಇವರ ವಿವಿಧ ಕಂಪನಿಗಳಲ್ಲಿ ಸುಮಾರು 70 ಸಾವಿರ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಅವರು ರಾಜ್ಯದಾದ್ಯಂತ ಐಷಾರಾಮಿ ಹೋಟೆಲ್‍ಗಳನ್ನು ಹೊಂದಿದ್ದು, ತಮ್ಮ ಅತಿಥಿಗಳನ್ನು ಕರೆದೊಯ್ಯಲು ಈ ಹೆಲಿಕಾಪ್ಟರ್ ಬಳಸುತ್ತಾರೆ.
ಅಂದಹಾಗೆ ಈ ಹೆಲಿಕಾಪ್ಟರ್ ನಲ್ಲಿ ಒಬ್ಬ ಪೈಲಟ್ ಸೇರಿ 7 ಪ್ರಯಾಣಿಕರು ಪ್ರಯಾಣಿಸಬಹುದು. ಇದು ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಿಂದ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಎಚ್145 ಸುಧಾರಿತ ವೈರ್‍ಲೆಸ್ ಸಂವಹನ ವ್ಯವಸ್ಥೆಯನ್ನೂ ಹೊಂದಿದೆ.