ಕೀವ್: ಇಡೀ ಉಕ್ರೇನ್ ದೇಶವನ್ನೇ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ದಾಳಿ ಮುಂದುವರೆಸಿರುವ ರಷ್ಯಾ, ಇದೀಗ ವಿಶ್ವದ ಅತಿದೊಡ್ಡ ವಿಮಾನ ಆಂಟೊನೊವ್ ಆನ್-225 ನ್ನು ನಾಶಪಡಿಸಿರುವುದು ದೃಢಪಟ್ಟಿದೆ.
ಕಳೆದ 9 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಇದೀಗ ದಾಳಿ ಮತ್ತಷ್ಟು ತೀವ್ರಗೊಳಿಸಿದ್ದು, ಈವರೆಗೆ ರಷ್ಯಾ ದಾಳಿಯಲ್ಲಿ ಉಕ್ರೇನ್ ನ 2 ಸಾವಿರಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಉಕ್ರೇನ್ ಜನನಿಬಿಡ ಪ್ರದೇಶಗಳು, ಸೇನಾ ನೆಲೆ, ಬಂದರು, ಪರಮಾಣು ವಿದ್ಯುತ್ ಸ್ಥಾವರ, ವಿಮಾನ ನಿಲ್ದಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ರಷ್ಯಾ ಉಕ್ರೇನ್ ರಾಷ್ಟ್ರವನ್ನೇ ಸಂಪೂರ್ಣ ನಾಶಪಡಿಸಲು ಹೊರಟಿದೆ.
ರಷ್ಯಾ ದಾಳಿಯಲ್ಲಿ ಉಕ್ರೇನ್ ನ ಹಾಸ್ಟೋಮೆಲ್ ವಿಮಾನ ನಿಲ್ದಾಣದಲ್ಲಿ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಎಂದೇ ಹೆಸರಾಗಿದ್ದ ಆಂಟೊನೊವ್ ಆನ್-225 ಮ್ರಿಯಾ ವಿಮಾನ ಧ್ವಂಸಗೊಂಡ ಬಗ್ಗೆ ವರದಿಯಾಗಿತ್ತು. ಇದೀಗ ಈ ಕುರಿತ ವಿಡಿಯೋ ವೈರಲ್ ಆಗಿದ್ದು, ವಿಮಾನ ಸಂಪೂರ್ಣ ಛಿದ್ರ ಛಿದ್ರಗೊಂಡಿರುವುದು ದೃಢಪಟ್ಟಿದೆ.
ಮ್ರಿಯಾ ವಿಮಾನ ಧ್ವಂಸದಿಂದಾಗಿ ಉಕ್ರೇನ್ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.