ಮುಂಬೈನ ಕುರ್ಲಾದಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ʼಬೆಸ್ಟ್ʼ ಎಲೆಕ್ಟ್ರಿಕ್ ಬಸ್ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೃತಪಟ್ಟ ಯುವತಿಯೊಬ್ಬರ ಕಥೆ ನಿಜಕ್ಕೂ ಕಣ್ಣೀರು ತರಿಸುವಂತಿದೆ.
ಮುಂಬೈನ ಕುರ್ಲಾ ನಿವಾಸಿಯಾಗಿರುವ 19 ವರ್ಷದ ಅಫ್ರೀನ್ ಶಾ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಸಿಕ್ಕಾಗ ಕೆಲಸದ ತಮ್ಮ ಮೊದಲ ದಿನವನ್ನು ಹೊಸ ಉತ್ಸಾಹ ಮತ್ತು ಆಕಾಂಕ್ಷೆಗಳೊಂದಿಗೆ ಪ್ರಾರಂಭಿಸಿದ್ದರು. ದುರಂತವೆಂದರೆ ಆ ದಿನ ಆಕೆಗೆ ಜೀವನದ ಕೊನೆಯ ದಿನವಾಗಿತ್ತು. ಕುರ್ಲಾ ರೈಲ್ವೇ ನಿಲ್ದಾಣದಿಂದ ಮನೆಗೆ ಹೋಗಲು ಆಟೋ ಸಿಗದ ಕಾರಣ ನಡೆದುಕೊಂಡು ಹೋಗುತ್ತಿದ್ದಾಗ, ʼಬೆಸ್ಟ್ʼ ಬಸ್ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ್ದಾರೆ.
ಕೆಲಸದ ಮೊದಲ ದಿನವನ್ನು ಮುಗಿಸಿದ ನಂತರ, ಅಫ್ರೀನ್ ಕುರ್ಲಾ ನಿಲ್ದಾಣವನ್ನು ತಲುಪಿದ್ದು, ಮನೆಗೆ ಹೋಗಲು ಯಾವುದೇ ಆಟೋ ಸಿಗಲಿಲ್ಲ. ಆಗ ತಮ್ಮ ತಂದೆಗೆ ಕರೆ ಮಾಡಿ, ತನ್ನನ್ನು ಕರೆದುಕೊಂಡು ಹೋಗಲು ಯಾರಾದರೂ ಬರುತ್ತೀರಾ ಎಂದು ಕೇಳಿದ್ದರು. ಆದರೆ, ಆ ಕ್ಷಣದಲ್ಲಿ ಯಾರೂ ಆಕೆಯನ್ನು ಕರೆದುಕೊಂಡು ಹೋಗಲು ಮನೆಯಲ್ಲಿ ಲಭ್ಯರಿರಲಿಲ್ಲ. ಹೀಗಾಗಿ ತಂದೆ ನೀನೇ ಮನೆಗೆ ಹೋಗು ಎಂದು ತಿಳಿಸಿದ್ದು, ನಡೆದುಕೊಂಡು ಹೋಗುವಾಗ ಬಸ್ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.
ʼಮಿಡ್ ಡೇʼ ವರದಿಯ ಪ್ರಕಾರ, ಅಪಘಾತದ ಸ್ಥಳದಲ್ಲಿ ಯಾರೋ ಯುವತಿಯ ಫೋನ್ ನೋಡಿ ಅದರಲ್ಲಿದ್ದ ಕೊನೆಯ ಸಂಖ್ಯೆಗೆ ಡಯಲ್ ಮಾಡಿದ್ದು, ಅದು ಅವರ ತಂದೆಯದ್ದಾಗಿತ್ತು ಎಂದು ಆಕೆಯ ಕುಟುಂಬ ಸದಸ್ಯರು ಹೇಳಿದ್ದಾರೆ. ಕೂಡಲೇ ಅವರು ಆಸ್ಪತ್ರೆಗೆ ಧಾವಿಸಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದ ಸಂಗತಿ ತಿಳಿದುಬಂತು. ಇದೀಗ ಕುಟುಂಬ ಸದಸ್ಯರು ದಿನನಿತ್ಯ ಕಣ್ಣಿರು ಸುರಿಸುತ್ತಿದ್ದು, ಮನೆಯಲ್ಲಿ ನೀರವ ಮೌನ ಆವರಿಸಿದೆ.
ಈ ಭೀಕರ ಅಪಘಾತದಲ್ಲಿ ಅಫ್ರೀನ್ ಮಾತ್ರವಲ್ಲ, ಒಟ್ಟು 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂಬೈನ ಕುರ್ಲಾ ಪ್ರದೇಶದಲ್ಲಿ ಏಳು ಜನರನ್ನು ಕೊಂದ ಬೆಸ್ಟ್ ಬಸ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚಾಲಕ ಸಂಜಯ್ ಮೋರೆ, ಕ್ಯಾಬಿನ್‌ನಿಂದ ಎರಡು ಬ್ಯಾಕ್ ಪ್ಯಾಕ್ ಜೊತೆ ಅಪಘಾತದ ನಂತರ ಮುರಿದ ಕಿಟಕಿಯಿಂದ ಜಿಗಿದಿರುವುದು ಕಂಡು ಬರುತ್ತದೆ.
50 ಸೆಕೆಂಡ್‌ಗಳಿಂದ 1 ನಿಮಿಷಕ್ಕೂ ಹೆಚ್ಚು ಅವಧಿಯ ನಾಲ್ಕೈದು ವಿಡಿಯೋ ಕ್ಲಿಪ್‌ಗಳು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.