ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ಮೊದಲ ದಿನವೇ 221 ನಾಮಪತ್ರ ಸಲ್ಲಿಕೆಯಾಗಿವೆ.
ಬಿಜೆಪಿ 27, ಕಾಂಗ್ರೆಸ್ ನಿಂದ 26, ಜೆಡಿಎಸ್ ನಿಂದ 12, ಆಮ್ ಆದ್ಮಿ ಪಕ್ಷದಿಂದ 10, ಬಿಎಸ್ಪಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, 45 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ರಾಜಕೀಯ ಪಕ್ಷಗಳಿಂದ 100 ನಾಮಪತ್ರಗಳು ಸಲ್ಲಿಕೆಯಾಗಿವೆ.
ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 14ರ ಇಂದು ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಏಪ್ರಿಲ್ 16ರಂದು ಭಾನುವಾರ ಸಾರ್ವತ್ರಿಕ ರಜೆ ಇರುವುದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲ. ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಗಳಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಕೆಯ ಮೊದಲ ದಿನ ಸಚಿವರಾದ ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್, ಮುರುಗೇಶ್ ನಿರಾಣಿ, ಸುನಿಲ್ ಕುಮಾರ್. ಸಿ.ಸಿ. ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.