
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ವಿಚಿತ್ರ ಮದುವೆಯೊಂದು ಬೆಳಕಿಗೆ ಬಂದಿದೆ. ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರೂ ದೆಹಲಿ ಮೂಲದವರಾಗಿದ್ದು ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲನೇಯವಳು ವರನ ಹೆಂಡತಿಯಾಗಿದ್ದರೆ, ಎರಡನೇಯವಳು ವರನ ಹೆಂಡತಿಯ ಗೆಳತಿ.
ಈ ಮೊದಲು ದೇವಸ್ಥಾನದಲ್ಲಿ ಮೊದಲನೇಯವಳನ್ನು ಮದುವೆಯಾದ ನಂತರ ಪುರುಷ ಮತ್ತು ಮಹಿಳೆ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಏಳು ವರ್ಷಗಳವರೆಗೆ ಮಹಿಳೆಗೆ ಮಗು ಆಗಲಿಲ್ಲ. ನಂತರ ಆಕೆ ತನ್ನ ಸ್ನೇಹಿತೆಗೆ ತನ್ನ ಪತಿಯನ್ನು ಮದುವೆಯಾಗುವಂತೆ ಮನವೊಲಿಸಿದಳು. ಬಳಿಕ ಪುರುಷ ತನ್ನ ಸಂಬಂಧಿಕರ ಮನೆಗೆ ಮದುವೆಗಾಗಿ ಹೆಂಡತಿ ಮತ್ತು ಆಕೆಯ ಗೆಳತಿಯನ್ನು ಫಿರೋಜಾಬಾದ್‌ಗೆ ಕರೆತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ನೆರೆಹೊರೆಯವರು ಈ ಮದುವೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ಆಶ್ರಯ ಕೇಂದ್ರಕ್ಕೆ ಕಳುಹಿಸಿದ್ದಾರೆ.