ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮಂಜ ಅಲಿಯಾಸ್ ಬೋಂಡ ಮಂಜನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಬೆಂಗಳೂರಿನ ನಾರಾಯಣ ನಗರದ ಡಬಲ್ ರೋಡ್ ನಲ್ಲಿ ಘಟನೆ ನಡೆದಿದೆ. ರೌಡಿಶೀಟರ್ ಮಂಜನ ವಿರುದ್ಧ 23 ಪ್ರಕರಣ ದಾಖಲಾಗಿದ್ದು, ಕೆಲವು ದಿನಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಮಂಜ ಇರುವ ಸ್ಥಳ ತಿಳಿದ ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಧನಕ್ಕೆ ಮುಂದಾಗಿದ್ದ ವೇಳೆ ಘಟನೆ ನಡೆದಿದೆ.
ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದ ತಂಡ ಬಂಧನಕ್ಕೆ ತೆರಳಿದ್ದ ವೇಳೆ ಮಾಹಿತಿ ತಿಳಿದ ಮಂಜ ಪರಾರಿಗೆ ಯತ್ನಿಸಿದ್ದಾನೆ. ಬೈಕ್ ನಲ್ಲಿ ತೆರಳುತ್ತಿದ್ದ ಮಂಜನನ್ನು ಪೊಲೀಸರು ಅಡ್ಡಗಟ್ಟಿದ್ದು, ಈ ವೇಳೆ ಸಿಸಿಬಿ ಹೆಡ್ ಕಾನ್ಸ್ ಟೇಬಲ್ ನಾಗರಾಜ್ ಅವರ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾನೆ.
ಶರಣಾಗಲು ತಿಳಿಸಿದರೂ ಮಂಜ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆದರೂ ಲೆಕ್ಕಿಸದೆ ಇನ್ಸ್ ಪೆಕ್ಟರ್ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಮಂಜನ ಕಾಲಿಗೆ ಗುಂಡು ಹಾರಿಸಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಮಂಜನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಹೆಡ್ ಕಾನ್ ಸ್ಟೇಬಲ್ ನಾಗರಾಜ್ ಮತ್ತು ರೌಡಿ ಶೀಟರ್ ಮಂಜನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.