ಬೆಂಗಳೂರು : ಗಣೇಶ ಹಬ್ಬ, ಮದುವೆ, ರಾಜಕೀಯ ಸಮಾರಂಭಗಳಲ್ಲಿ ಪಟಾಕಿ ನಿಷೇಧಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅತ್ತಿಬೆಲೆ ದುರಂತದ ಹಿನ್ನೆಲೆ ಎಚ್ಚೆತ್ತ ರಾಜ್ಯ ಸರ್ಕಾರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದೆ. ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ . ರಾಜಕೀಯ ಕಾರ್ಯಕ್ರಮ,ಗಣೇಶ ಹಬ್ಬ ಹಾಗೂ ಮದುವೆಯಲ್ಲಿ ಪಟಾಕಿ ಸಿಡಿಸುವಂತಿಲ್ಲ, ಪ್ರತಿಯೊಬ್ಬರೂ, ದೀಪಾವಳಿಯಲ್ಲಿ ಹಸಿರು ಪಟಾಕಿ ಬಳಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಹಸಿರು ಪಟಾಕಿಯನ್ನೇ ಹೊಡೆಯಬೇಕು, ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಹೇಳಿದರು.
ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತಕ್ಕೆ ಇಡೀ ರಾಜ್ಯವೇ ಮರುಗಿದೆ. ಘೋರ ದುರಂತದಲ್ಲಿ 14 ಮಂದಿ ಸುಟ್ಟು ಕರಕಲಾಗಿದ್ದು, ಅತ್ತಿಬೆಲೆಯ ಬಾಲಾಜಿ ಪಟಾಲಿ ಅಂಗಡಿಗೆ ಬೆಂಕಿ ಬಿದ್ದು 14 ಮಂದಿ ಸಜೀವ ದಹನವಾಗಿದ್ದು, ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಅಲರ್ಟ್ ಆದ ಸರ್ಕಾರ ಹಲವು ಕಠಿಣ ನಿಯಮ ಜಾರಿಗೆ ತರಲು ಸಿದ್ದತೆ ನಡೆಸಿದೆ.
ಅದೇ ರೀತಿ ಅತ್ತಿಬೆಲೆ ದುರಂತಕ್ಕೆ ಕಾರಣರಾದ ತಹಶೀಲ್ದಾರ್, ಪಿಐ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.