ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಉಂಟಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಪೂರ್ವ ಬರ್ದ್ವಾನ್ ನಲ್ಲಿನ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಕೊರೊನಾ ಸೋಂಕಿತರು ಇದ್ದ ವಾರ್ಡ್ ನಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಸೋಂಕಿತ ವ್ಯಕ್ತಿ, ಬೆಂಕಿಯ ಕೆನ್ನಾಲೆಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಅಲ್ಲಿದ್ದ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆನಂತರ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನಂದಿಸುವ ಕಾರ್ಯ ಕೈಗೊಂಡರು. ಅಷ್ಟರಲ್ಲಾಗಿಯೇ ವಾರ್ಡ್ ಗೆ ಬೆಂಕಿ ಆವರಿಸಿದೆ. ಪರಿಣಾಮ ಹಲವರು ಗಾಯಗೊಂಡು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಬರ್ದ್ವಾನ್ ಜಿಲ್ಲೆಯ ಸಂಧ್ಯಾ ರಾಯ್ (60) ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ. ಇದರಿಂದಾಗಿ ರೋಗಿಗಳು ಆತಂಕದಲ್ಲಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ, ಘಟನೆ ಕುರಿತು ತನಿಖೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಲಾಗಿದೆ.