ಬೆಂಗಳೂರು: ರಾಯಲ್ ಎನ್ಫೀಲ್ಡ್ ಬಗ್ಗೆ ಹೆಚ್ಚಿನ ವ್ಯಾಮೋಹ ಹೊಂದಿದ್ದ ಯುವಕನೊಬ್ಬ ತನ್ನ ಇಚ್ಛೆಯ ಬೈಕ್ ಖರೀದಿಸಲು ಸಾಧ್ಯವಾಗದ ಕಾರಣ ಬೇರೆಯವರ ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಿವಾಸಿ ಪುಲ್ಕಿತ್(25) ಬಂಧಿತ ಆರೋಪಿ. ವೇಣುಗೋಪಾಲನಗರದ ಹೆಚ್.ಎಂ.ಕೆ. ಲೇಔಟ್ ನ ಪಿಜಿ ಯಲ್ಲಿ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್, ಆಕ್ಟಿವಾ ಹಾಗೂ ಫ್ಯಾಷನ್ ಪ್ರೊ ಬೈಕುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸೆ. 19ರಂದು ರಾತ್ರಿ 1:40ರ ಸುಮಾರಿಗೆ ಪಿಜಿ ಆವರಣಕ್ಕೆ ಬಂದಿದ್ದ ಆರೋಪಿ ರಾಯಲ್ ಎನ್ಫೀಲ್ಡ್ ಬೈಕ್ ನಿಂದ ಪೆಟ್ರೋಲ್ ತೆಗೆದು ದ್ವಿಚಕ್ರವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದ. ಅದೇ ಬೆಂಕಿಯಲ್ಲಿ ಸಿಗರೇಟ್ ಹಚ್ಚಿಕೊಂಡು ಪರಾರಿಯಾಗಿದ್ದ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನನಗೆ ರಾಯಲ್ ಎನ್ಫೀಲ್ಡ್ ಮೇಲೆ ತುಂಬಾ ಆಸೆ ಇತ್ತು. ಖರೀದಿಸಲು ಸಾಧ್ಯವಾಗದ ಕಾರಣ ಹತಾಶೆಯಿಂದ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.