
ಕಲಬುರ್ಗಿ: ಜೋಳದ ಮೇವಿನ ಕಣಕಿ ಸಾಗಿಸುತ್ತಿದ್ದಾಗ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್ ನಲ್ಲಿದ್ದ ಜೋಳದ ಮೇವು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿಯ ಮೇಳಕುಂದಾ ಬಿ.ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇವಿನ ಕಣವು ಮಲ್ಲಿನಾಥ್ ಕೊಳ್ಳುರ ಎಂಬುವವರಿಗೆ ಸೇರಿದ್ದಾಗಿದೆ. ಮಲ್ಲಿನಾಥ್ ಹೊನಗುಂಟೆ ಗ್ರಾಮದಲ್ಲಿ ಮೇವಿನ ಕಣವಿ ಖರೀದಿಸಿ ಟ್ರ್ಯಾಕ್ಟರ್ ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಬೀದಿ ಬದಿಯ ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.
ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ಗೆ ಬೆಂಕಿ ಆವರಿಸಿದ್ದು, ನೋಡ ನೋಡುತ್ತಿದ್ದಂತೆ ಟ್ರ್ಯಾಕ್ಟರ್ ಹಾಗೂ ಜೋಳದ ಮೇವು ಧಗಧಗನೆ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಆದರೆ ಜೋಳದ ಮೇವು ಸುಟ್ಟು ಭಸ್ಮವಾಗಿದೆ.