ಜೈಪುರ: ಕೋಣೆಯಲ್ಲಿ ಅಳವಡಿಸಲಾಗಿದ್ದ ರೂಮ್ ಹೀಟರ್ ನಿಂದ ಬೆಂಕಿ ಅವಘಡ ಸಂಭವಿಸಿ ತಂದೆ ಹಾಗೂ ಮಗಳು ಸಜೀವ ದಹನಗೊಂಡ ಘಟನೆ ರಾಜಸ್ಥಾನದ ಖೈರ್ತಲ್-ತಿಜಾರಾ ಜಿಲ್ಲೆಯಲ್ಲಿ ನಡೆದಿದೆ.
ದುರಂತ ಘಟನೆಯಲ್ಲಿ ಪತಿ ಮತ್ತು ಅವರ ಮೂರು ತಿಂಗಳ ಮಗಳು ಸಜೀವ ದಹನವಾಗಿದ್ದಾರೆ ಮತ್ತು ಅವರ ಪತ್ನಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಶೇಖ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೀಟರ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ದೀಪಕ್ ಯಾದವ್ ಮತ್ತು ಅವರ ಮೂರು ತಿಂಗಳ ಮಗಳು ನಿಶಿಕಾ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಕ್ ಅವರ ಪತ್ನಿ ಸಂಜು ಅವರಿಗೆ ಸುಟ್ಟ ಗಾಯಗಳಾಗಿವೆ.
ಕೂಗು ಕೇಳಿದ ನೆರೆಹೊರೆಯವರು ಅವರ ರಕ್ಷಣೆಗೆ ಧಾವಿಸಿದರು ಮತ್ತು ಬೆಂಕಿಯನ್ನು ನಂದಿಸಿದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ದೀಪಕ್ ಮತ್ತು ನಿಶಿಕಾ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು.