ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಚಿಲುಮೆ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚಿಲುಮೆ ಹಾಗೂ ಕೆ.ಎಂ. ಲೋಕೇಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಕೆ.ಎಂ. ಲೋಕೇಶ್ ಎ 1 ಆರೋಪಿಯಾಗಿದ್ದಾರೆ. ಚಿಲುಮೆ ವಿರುದ್ಧ ನಿನ್ನೆ ಎರಡು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಾಗಿದ್ದು ಬೆಂಗಳೂರಿನ ಹಲಸೂರು ಗೇಟ್ ಹಾಗೂ ಕಾಡುಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅನುಮತಿ ಪಡೆಯದೇ ಬೂತ್ ಮಟ್ಟದ ಚುನಾವಣಾಧಿಕಾರಿಗಳ ನಕಲಿ ಗುರುತಿನ ಚೀಟಿ ಮಾಡಿಕೊಂಡು ಮನೆಗಳಿಗೆ ತೆರಳಿ ಮತದಾರರ ಗುರುತಿನ ಚೀಟಿ, ಆಧಾರ್ ಮಾಹಿತಿ ಸಂಗ್ರಹಿಸಿ ಮತದಾರರ ವೈಯಕ್ತಿಕ ಮಾಹಿತಿಯನ್ನು ಆಪ್ ವೊಂದಕ್ಕೆ ಅಪ್ ಲೋಡ್ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.