ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬಳ್ಳಾವರದ ಸಮೀಪ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿದ ಆರೋಪದಲ್ಲಿ ಮೂವರು ತಹಶೀಲ್ದಾರ್ ಗಳ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ. ಇವರಲ್ಲಿ ಇಬ್ಬರು ನಿವೃತ್ತರಾಗಿದ್ದಾರೆ.
ಬಳ್ಳಾವರ ಗ್ರಾಮದ ಸರ್ವೇ ನಂಬರ್ 22ರಲ್ಲಿ 353 ಎಕರೆ ಅರಣ್ಯ ಭೂಮಿ ಇದೆ. 1930 ರಲ್ಲಿ ಅರಣ್ಯ ಭೂಮಿ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಸರ್ವೇ ನಂಬರ್ ನಲ್ಲಿ ಕಂದಾಯ ಭೂಮಿ ಇರುವುದಿಲ್ಲ. ಆದರೆ, 1999, 2005, 2022 ರಲ್ಲಿ ಖಾಸಗಿ ವ್ಯಕ್ತಿಗಳಿಗೆ ಈ ಭೂಮಿ ಮಂಜೂರು ಮಾಡಲಾಗಿದೆ.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಗಳಾದ ಕೆ.ಎನ್. ನಾರಾಯಣಪ್ಪ, ಜಿ.ಎಸ್. ನಾಗರಾಜ್ ಮತ್ತು ಪೂರ್ಣಿಮಾ ಅವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದಾಖಲಿಸಿದ್ದಾರೆ. ಪೂರ್ಣಿಮಾ ಅವರು ಕೆ.ಆರ್. ನಗರದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಇಬ್ಬರು ನಿವೃತ್ತರಾಗಿದ್ದಾರೆ. ತರೀಕೆರೆ ಜೆಎಂಎಫ್ ಸಿ ಕೋರ್ಟ್ ಅನುಮತಿ ಪಡೆದು ಈ ಮೂವರು ತಹಶೀಲ್ದಾರ್ ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.